ರೋಮ್(ಇಟಲಿ):ಜಗತ್ತಿನಲ್ಲಿ ಆಹಾರ ಸಾಮಗ್ರಿಗಳ ಬೆಲೆ ಕುಸಿದಿದೆ ಎಂದು ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಘಟನೆ ವರದಿಯೊಂದರಲ್ಲಿ ತಿಳಿಸಿದೆ. ಕೊರೊನಾ ಮಹಾಮಾರಿಯ ಕಾರಣಕ್ಕೆ ಆರ್ಥಿಕತೆ ಬಹುತೇಕ ಸ್ತಬ್ಧವಾಗಿರುವ ಕಾರಣದಿಂದ ಬೆಲೆಗಳ ತೀವ್ರ ಇಳಿಮುಖವಾಗಿವೆ.
ಫೆಬ್ರವರಿಗೆ ಹೋಲಿಕೆ ಮಾಡುವುದಾದರೆ ತರಕಾರಿ ಎಣ್ಣೆಗಳ ಬೆಲೆಯಲ್ಲಿ ಶೇ 12ರಷ್ಟು ಇಳಿಕೆ ಕಂಡಿದೆ. ಇಂಧನಕ್ಕೂ ಕೂಡಾ ಬೇಡಿಕೆ ಕಡಿಮೆಯಾಗಿದೆ. ಸೋಯಾ ಎಣ್ಣೆ ಹಾಗೂ ಬಯೋ ಡೀಸೆಲ್ಗೆ ಯೂರೋಪಿಯನ್ ಯೂನಿಯನ್ನಲ್ಲಿ ಬೇಡಿಕೆ ಕಡಿಮೆಯಾಗಿದೆ ಎಂದು ಸಂಘಟನೆ ತಿಳಿಸಿದೆ.
ಸಕ್ಕರೆ ಬೆಲೆ ಮಾರ್ಚ್ ತಿಂಗಳಿನಲ್ಲಿ ಶೇಕಡಾ 12ರಷ್ಟು ಇಳಿಕೆ ಕಂಡಿದೆ. ಬಾರ್ ಹಾಗು ರೆಸ್ಟೋರೆಂಟ್ಗಳು ಲಾಕ್ ಡೌನ್ ಪರಿಣಾಮವಾಗಿ ಮುಚ್ಚಿರುವುದರಿಂದ ಬೇಡಿಕೆಯೂ ತಗ್ಗಿದೆ. ಬೆಳೆ ಕಾಳುಗಳ ಬೆಲೆ ಶೇಕಡಾ 1.9ರಷ್ಟು ಇಳಿಕೆಯಾಗೋದರ ಜೊತೆಗೆ ಅಕ್ಕಿಯ ಬೆಲೆಯೂ ಸ್ವಲ್ಪ ಕಡಿಮೆಯಾಗಿದೆ. ಆದರೆ ಚೀನಾ, ಭಾರತ ಹಾಗೂ ವಿಯೆಟ್ನಾಂನಲ್ಲಿ ಅಕ್ಕಿಯ ಬೆಲೆ ಸ್ವಲ್ಪ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಡೈರಿ ಉತ್ಪನ್ನಗಳಲ್ಲಿ ಶೇಕಡಾ 3ರಷ್ಟು ಇಳಿಕೆ ಕಂಡಿದೆ. ಇದು ನಾಲ್ಕು ತಿಂಗಳಲ್ಲಿ ಕಂಡ ಮೊದಲ ಕುಸಿತವಾಗಿದೆ. ಮಾಂಸಾಹಾರ ಬೆಲೆಗಳಲ್ಲಿಯೂ ಶೇಕಡಾ 0.06ರಷ್ಟು ಇಳಿಕೆ ಕಂಡುಬಂದಿದೆ.
ಒಟ್ಟಾರೆಯಾಗಿ ಆಹಾರ ಸಾಮಗ್ರಿಗಳ ಬೆಲೆ 4.3ರಷ್ಟು ಇಳಿಕೆ ಕಂಡಿದ್ದು, ಎರಡು ವರ್ಷದಲ್ಲೇ ಇದೇ ಮೊದಲ ಬಾರಿಗೆ ಆಹಾರ ಸಾಮಗ್ರಿಗಳ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ಸ್ಪಷ್ಟನೆ ನೀಡಿದೆ. ವಿಶ್ವ ಆಹಾರ ಮತ್ತು ಕೃಷಿ ಸಂಘಟನೆ ಪ್ರತಿ ತಿಂಗಳು ವಿಶ್ವದಾದ್ಯಂತ 74 ಆಹಾರ ಸಾಮಗ್ರಿಗಳ ಬೆಲೆಯ ಕುರಿತು ವರದಿ ಪ್ರಕಟಿಸುತ್ತದೆ. ಮುಂದಿನ ವರದಿ ಮೇ ತಿಂಗಳ 7ರಂದು ಪ್ರಕಟವಾಗಲಿದೆ.