ದಿಂಡಿಗಲ್(ತಮಿಳುನಾಡು):ಶೌಚಾಲಯ ಕಟ್ಟಿಸಲು ಬಿಡುತ್ತಿಲ್ಲವೆಂದು ಪೊಲೀಸ್ ಠಾಣೆಗೆ ದೂರು ನೀಡಲು ಹೋದ ಮಹಿಳೆಯ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೀಮೆಎಣ್ಣೆ ಸುರಿದುಕೊಂಡು ಮಹಿಳೆ ಬೆಂಕಿ ಹಚ್ಚಿಕೊಳ್ಳಲು ಮುಂದಾದ ಘಟನೆ ನಡೆದಿದೆ.
ಡಿಸಿ ಕಚೇರಿ ಮುಂದೆ ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ ಯತ್ನ!
ಸ್ವಚ್ಛ ಭಾರತ ಯೋಜನೆಯಡಿ ತಮ್ಮ ಕುಟುಂಬಕ್ಕೆ ಶೌಚಾಲಯ ನಿರ್ಮಿಸಬೇಕೆಂಬ ಈ ಮಹಿಳೆಯ ಪ್ರಯತ್ನವನ್ನು ವಿರೋಧಿಸಿ ಆಕೆಯ ಗಂಡನ ತಮ್ಮ ಹಲ್ಲೆ ನಡೆಸಿದ್ದನಂತೆ. ಈ ಬಗ್ಗೆ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಕ್ಕೆ ಮಹಿಳೆ ಜಿಲ್ಲಾಧಿಕಾರಿ ಕಚೇರಿಗೆ ಬಂದು ಬೆಂಕಿ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
ಧನಮ್ ಎಂಬ ಮಹಿಳೆ ಇಲ್ಲಿನ ಪಿಲಿಯ ರಾಜಕ್ಕಪಟ್ಟಿ ಎಂಬಲ್ಲಿ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಸ್ವಚ್ಛ ಭಾರತ ಮಿಶನ್ ಅಡಿಯಲ್ಲಿ ತಮ್ಮ ಕುಟುಂಬಕ್ಕೊಂದು ಶೌಚಾಲಯ ನಿರ್ಮಿಸಬೇಕು ಎಂಬ ಕನಸು ಹೊತ್ತಿದ್ದ ಧನಮ್ಗೆ ತನ್ನ ಗಂಡನ ತಮ್ಮ ಅಡ್ಡಿ ಬಂದಿದ್ದಾನೆ. ಆಕೆಯ ಪ್ರಯತ್ನಕ್ಕೆ ವಿರೋಧಿಸಿ ಧನಮ್ ಮೇಲೆ ಹಲ್ಲೆ ನಡೆಸಿದ್ದನಂತೆ. ಹೀಗಾಗಿ ದೂರು ನೀಡಲು ತಾಲೂಕು ಪೊಲೀಸ್ ಠಾಣೆಗೆ ಬಂದ ಧನಮ್ ದೂರನ್ನು ಸ್ವೀಕರಿಸಲು ಪೊಲೀಸರು ನಿರಾಕರಿಸಿದ್ದಾರೆ.
ಹೀಗಾಗಿ ತನ್ನ ಪ್ರಯತ್ನ ಫಲಿಸದೆ ದುಃಖಿತರಾದ ಧನಮ್, ನೇರವಾಗಿ ತಮ್ಮ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಮ್ಮ ಮೇಲೆ ತಾವೇ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಮಹಿಳೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಹಿಳೆ ಶಾಂತಳಾಗಿ ಆತ್ಮಹತ್ಯೆ ಯತ್ನವನ್ನು ಕೈಬಿಟ್ಟಿದ್ದಾರೆ.