ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ಗಡಿ ವಿವಾದಗಳು ಬಗೆಹರಿಯುವಂತೆ ಕಾಣುತ್ತಿಲ್ಲ. ಇದರ ಬದಲಾಗಿ ಘರ್ಷಣೆಗಳು ಹೆಚ್ಚುತ್ತಿದೆ. ಹೀಗಾಗಿ ಉಭಯ ರಾಷ್ಟ್ರಗಳ ನಡುವಣ ವಾಸ್ತವಿಕ ಗಡಿರೇಖೆ(LAC)ಯು ಹೊಸ ಗಡಿ ನಿಯಂತ್ರಣ ರೇಖೆ (LoC) ಆಗುವತ್ತ ಸಾಗುತ್ತಿದೆ.
2013 ರಲ್ಲಿ ಭಾರತ ಹಾಗೂ ಪಾಕಿಸ್ತಾನ ದೇಶಗಳು ಸಹಿ ಹಾಕಿದ ಒಪ್ಪಂದದ ಪ್ರಕಾರ, ಉಭಯ ದೇಶಗಳಲ್ಲಿ ಯಾವುದೇ ದೇಶವು ಕದನ ವಿರಾಮವನ್ನು ಉಲ್ಲಂಘಿಸಿದರೆ, ಪರಸ್ಪರ ಗುಂಡಿನ ದಾಳಿ ನಡೆಸಲಾಗುತ್ತದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್‌ಒಸಿ ಅಥವಾ ಗಡಿ ನಿಯಂತ್ರಣ ರೇಖೆಯನ್ನು ‘ಬಿಸಿ’ ಗಡಿ ಎಂದು ಪರಿಗಣಿಸಲಾಗಿದೆ.
ಚೀನಾ ಹಾಗೂ ಭಾರತದ ನಡುವೆ ಇರುವ ವಾಸ್ತವಿಕ ಗಡಿ ರೇಖೆಯು, ಗಡಿ ನಿಯಂತ್ರಣ ರೇಖೆಗಿಂತ ಭಿನ್ನ. ಉಭಯ ರಾಷ್ಟ್ರಗಳ ನಡುವಣ ಪರಸ್ಪರ ತಿಳುವಳಿಕೆ ಮತ್ತು ಒಪ್ಪಿಗೆಯ ನಿಯಮಗಳಿಂದಾಗಿ ಈ ಎಲ್‌ಎಸಿಯನ್ನು ದಶಕಗಳಿಂದ ಸಂಘರ್ಷಗಳಿಂದ ಮುಕ್ತವಾಗಿರಿಸಲಾಗಿದೆ. ಆದ್ರೆ ಭಾರತ-ಚೀನಾ ನಡುವೆ ನಿಧಾನವಾಗಿ ಗಡಿ ವಿವಾದಗಳು ಸದ್ದು ಮಾಡುತ್ತಿರುವಂತೆ, ಗಡಿ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಇಲ್ಲಿ ಉಭಯ ರಾಷ್ಟ್ರಗಳ ನಡುವೆ ಯುದ್ಧ ಸನ್ನಿವೇಶ ನಡೆಯುತ್ತಲೇ ಇದೆ. ಪಂಗೊಂಗ್ ತ್ಸೊನ ದಕ್ಷಿಣ ದಂಡೆಯಲ್ಲಿರುವ ರೆಜಾಂಗ್ ಲಾ ಬಳಿಯ ಮುಖ್ಪಾರಿ ಪರ್ವತದ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಸೆಪ್ಟೆಂಬರ್ 7ರ ಸೋಮವಾರ ನಡೆದ ಗುಂಡಿನ ದಾಳಿಗಳು, ಉಭಯ ರಾಷ್ಟ್ರಗಳ ಒಪ್ಪಂದದ ಪ್ರಮುಖ ಬದ್ಧತೆಯನ್ನು ಮುರಿದುಬಿಟ್ಟಿತು. ಇಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಎಂಬ ಸಂಧಾನವನ್ನು ಕೂಡಾ ಚೀನಾ ಮರೆತುಬಿಟ್ಟಿತು. ಇದು ಭಾರತಕ್ಕೆ ಆತಂಕ ತಂದಿಟ್ಟಿದೆ.
ಚೀನಾ ಸೇನೆಯು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಹೆಚ್ಚು ಸಕ್ರಿಯವಾಗುತ್ತದೆ. ಆ ಘೋರ ಕತ್ತಲೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆಯೇ ಅಥವಾ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಲಾಗಿದೆಯೇ ಎಂಬುದನ್ನು ಕಂಡುಹಿಡಿಯುವುದು ಕಷ್ಟ. ಶಸ್ತ್ರ ಸಜ್ಜಿತ ಟ್ರಕ್‌ಗಳು ಹಾಗೂ ಭಾರಿ ವಾಹನಗಳು ರಾತ್ರಿಯಲ್ಲಿ ಪಂಗೊಂಗ್ ತ್ಸೊದ ದಕ್ಷಿಣ ದಂಡೆಯ ಚೀನಾ ಸೇನಾ ನೆಲೆಗಳಿಗೆ ಚಲಿಸುತ್ತಿರುವುದನ್ನು ಆ ಕತ್ತಲೆಯಲ್ಲಿ ನಾವು ನೋಡಿದ್ದೇವೆ. ಅದು ಯುದ್ಧತಂತ್ರದ ಕಾರಣಗಳಿಗಾಗಿ ಮಾತ್ರವೇ ಆಗಿರಬಹುದು ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಎಲ್‌ಎಸಿಯಲ್ಲಿ ಯುದ್ಧ ಸನ್ನಿವೇಶ ನಿರ್ಮಿಸುವುದು ಒಪ್ಪಂದದ ಪ್ರಕಾರ ನಿಷಿದ್ಧ. ಆದರೆ ಇತ್ತೀಚೆಗೆ ನಡೆದ ದಾಳಿಯಿಂದಾಗಿ ಇಲ್ಲಿ ಈ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಬಂದೂಕುಗಳು ಮತ್ತು ಟ್ಯಾಂಕ್‌ಗಳು ಸೇರಿದಂತೆ ಮಿಲಿಟರಿ ಉಪಕರಣಗಳಷ್ಟೇ ಅಲ್ಲದೆ, ಭಾರತ ಮತ್ತು ಚೀನಾ ಒಟ್ಟಾಗಿ ಎಲ್‌ಎಸಿ ಮತ್ತು ಆಳವಾದ ಪ್ರದೇಶಗಳಲ್ಲಿ 1,00,000 ಕ್ಕೂ ಹೆಚ್ಚು ಸೈನಿಕರನ್ನು ಸಜ್ಜುಗೊಳಿಸಿವೆ. ವಾಯು ಸ್ವತ್ತುಗಳನ್ನು ಸಹ ನಿಯೋಜಿಸಲಾಗಿದೆ.
ಚೀನಾ ಸ್ಥಾಪಿಸಿದ ಎಲ್‌ಎಸಿಯ ಆಳವಾದ ಪ್ರದೇಶಗಳಲ್ಲಿ ಚೀನಾದ ವೈ -20 ಮಿಲಿಟರಿ ಸಾರಿಗೆ ವಿಮಾನ ಏರ್‌ಡ್ರಾಪಿಂಗ್ ಪ್ಯಾರಾಟ್ರೂಪರ್‌ಗಳು, ಶಕ್ತಿಶಾಲಿ ಗನ್ಗಳು, ಕಾಲಾಳುಪಡೆ ಹಾಗೂ ಯುದ್ಧ ವಾಹನಗಳನ್ನು ಚೀನಾ ನಿಯೋಜಿಸಿದೆ ಎಂಬ ಮಾಹಿತಿಯೂ ಸೇನೆಗೆ ಲಭ್ಯವಾಗಿದೆ.
ಹೀಗಾಗಿಯೇ ಭಾರತ ಹಾಗೂ ಚೀನಾ ನಡುವಣ ಗಡಿ, ನಿಧಾನವಾಗಿ ಭಾರತ ಹಾಗೂ ಪಾಕ್ ನಡುವೆ ಇರುವ ಗಡಿಯಂತೆ ಬದಲಾಗುತ್ತಿದೆ. ಇದರ ನಡುವೆ ಪಾಕ್ ಹೆಗಲ ಮೇಲೆ ಕೈ ಇಟ್ಟು ನೀನು ನನ್ನ ದೋಸ್ತ್ ಎಂದು ಹೇಳುತ್ತಿರುವ ಚೀನಾದ ನಡೆ ಭಾರತಕ್ಕೆ ಎಂದಿಗೂ ಮಾರಕವೇ ಸರಿ.