ನವದೆಹಲಿ: ಪಾಟ್ನಾ ಸಾಹೀಬ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಪರಿಣಾಮ ಗರಂ ಆಗಿರುವ ಶತ್ರುಘ್ನ ಸಿನ್ಹಾ, ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಬಿಹಾರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಅವರ ಪಾಟ್ನಾ ಸಾಹೀಬ್ ಕ್ಷೇತ್ರದ ಟಿಕೆಟ್ ಅನ್ನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ನೀಡಲಾಗಿದೆ. ಈ ಮೂಲಕ ಸಿನ್ಹಾಗೆ ಬಿಜೆಪಿ ಕೊಕ್ ನೀಡಿದೆ.
ಈ ಬೆನ್ನಲ್ಲೇ ಅಸಮಾಧಾನ ಹೊರಹಾಕಿರುವ ಶತ್ರುಘ್ನ ಸಿನ್ಹಾ, 'ನ್ಯೂಟನ್ ಮೂರನೇ ನಿಯಮದಂತೆ ಪ್ರತಿಯೊಂದು ಕ್ರಿಯೆಗೆ ಸಮಾನ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ಅದೇ ನಾಣ್ಯದಿಂದ ಲೆಕ್ಕ ಚುಕ್ತಾ ಮಾಡುವೆ' ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಹಾಗೆಯೇ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ. ಅಡ್ವಾಣಿ ಅವರ ವ್ಯಕ್ತಿತ್ವಕ್ಕೆ ಹೋಲಿಕೆ ಹಾಗೂ ಅವರ ಸ್ಥಾನ ತುಂಬಲು ಸಾಧ್ಯವಿಲ್ಲದ ಶಾಗೆ ಗಾಂಧಿನಗರ ಕ್ಷೇತ್ರ ಕೊಡಲಾಗಿದೆ. ಆದ್ರೆ ಅಡ್ವಾಣಿ ಅವರು ದೇಶದ ಜನರ ಮನಸ್ಸಿನಲ್ಲಿ ಮೇಲ್ಪಂಕ್ತಿಯಲ್ಲೇ ಇರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಹೈಕಮಾಂಡ್ ವಿರುದ್ಧ ಶತ್ರುಘ್ನ ಸಿನ್ಹಾ ಪದೇ ಪದೆ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ.