ರಾಯ್ಬರೇಲಿ:ಸಕ್ರಿಯ ರಾಜಕಾರಣಕ್ಕಿಳಿದು ಕಾಂಗ್ರೆಸಿಗರಲ್ಲಿ ಹೊಸ ಭರವಸೆ ಮೂಡಿಸಿರುವ ಪ್ರಿಯಾಂಕಾ ಗಾಂಧಿ, ಈಗ ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯತ್ತ ಕಣ್ಣು ನೆಟ್ಟಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ರಾಯ್‌ಬರೇಲಿಗೆ ನಿನ್ನೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. ಈ ವೇಳೆ ಕಾರ್ಯಕರ್ತರು, ಈ ಕ್ಷೇತ್ರದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಪ್ರಿಯಾಂಕಾರಿಗೆ ಒತ್ತಾಯ ಮಾಡಿದರು. ಆಗ ಸ್ಪರ್ಧೆ ಬಗ್ಗೆ ಪರೋಕ್ಷವಾಗಿ, 'ವಾರಣಾಸಿಯಲ್ಲೇಕೆ ಆಗಬಾರದು?' ಎಂದು ನಗುತ್ತಾ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಮೊನ್ನೆಯಷ್ಟೆ, ಪಕ್ಷ ಬಯಸಿದರೆ ತಾನು ಖಂಡಿತಾ ಸ್ಪರ್ಧಿಸುವೆ ಎಂದು ಪ್ರಿಯಾಂಕಾ ಹೇಳಿದ್ದರು. ಈಗ ವಾರಣಾಸಿಯ ಹೆಸರು ಉಲ್ಲೇಖಿಸಿ, ಕಾಂಗ್ರೆಸ್ ಕಾರ್ಯಕರ್ತರಿಗೇ ಅಚ್ಚರಿ ಮೂಡಿಸಿದ್ದಾರೆ.
ಪೂರ್ವ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಆಯ್ಕೆ ಆದಾಗಿನಿಂದ ಕಾಂಗ್ರೆಸ್ಗೆ ಹೊಸ ಭರವಸೆ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಪ್ರಿಯಾಂಕಾ ತನ್ನಜ್ಜಿ ಇಂದಿರಾರನ್ನೇ ಹೋಲುವುದರಿಂದ ಅವರಂತೆಯೇ ರಾಜಕಾರಣದಲ್ಲೂ ಚಾಪು ಮೂಡಿಸುತ್ತಾರೆ ಎಂಬುದು ಕಾಂಗ್ರೆಸಿಗರ ಮಾತು. ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಈಗಾಗಲೇ ಪ್ರಿಯಾಂಕಾ ಪ್ರಚಾರ ಕೈಗೊಂಡು, ಸಾಕಷ್ಟು ಸುದ್ದಿ ಮಾಡಿದ್ದರು.