ಕರ್ನಾಟಕ

karnataka

ETV Bharat / bharat

ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಏಕೆ ಮುಖ್ಯ ?

ಈ ಹಿಂದೆ ಮಾಡಿದ ಅರೆಮನಸ್ಸಿನ ಮತ್ತು ವಿಫಲ ಪ್ರಯತ್ನಗಳಿಗೆ ಹೋಲಿಸಿದರೆ ದೃಢವಾದ ಶೈಕ್ಷಣಿಕ ವ್ಯವಸ್ಥೆ ಪ್ರತಿಪಾದಿಸುವ ಹೊಸ ಶಿಕ್ಷಣ ನೀತಿ ಹಲವು ಪಟ್ಟು ಉತ್ತಮವಾಗಿ ಇದೆ. ವಿವಿಧ ಅವಧಿಗಳಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ಇದು ಸಶಕ್ತವಾಗಿ ಕಾಣುತ್ತಿದೆ. ಶಿಕ್ಷಣ ಕ್ಷೇತ್ರ ಬಲಗೊಂಡರೆ, ಉತ್ಪಾದಕ ಪ್ರಕ್ರಿಯೆಗಳಲ್ಲಿ ಮಾನವ ಸಂಪನ್ಮೂಲಗಳ ಬಳಕೆ ಹೆಚ್ಚುತ್ತದೆ, ಇದರಿಂದ ದೇಶದ ಭವಿಷ್ಯ ಬದಲಾಗುತ್ತದೆ.

new education policy of India
ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ

By

Published : Aug 3, 2020, 2:24 PM IST

ಮೋದಿ ಸರ್ಕಾರದ ಎರಡನೇ ಆಡಳಿತ ಅವಧಿಯ ಮೊದಲ ದಿನದಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೊದಲ ಸಭೆ ನಡೆಯಿತು. ಆಗ ಮಂಡಿಸಲಾದ ಮತ್ತು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ಕಸ್ತೂರಿ ರಂಗನ್ ಸಮಿತಿ ವರದಿ ದೇಶದಲ್ಲಿ ಕ್ರಿಯಾಶೀಲ ವಿಜ್ಞಾನವನ್ನು ಆಧರಿಸಿದ ಹೊಸ ಸಮಾಜ ನಿರ್ಮಿಸುವ ಕನಸು ಕಂಡಿದೆ. ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗೆ ವಿವಿಧ ಹಂತಗಳಲ್ಲಿ ನಿರ್ಣಾಯಕ ಸುಧಾರಣೆಗಳನ್ನು ತರುವುದು. ಆ ಮೂಲಕ 2040ರ ವೇಳೆಗೆ ಭಾರತೀಯ ಬೋಧನೆ- ಕಲಿಕೆ ವ್ಯವಸ್ಥೆಯನ್ನು ವಿಶ್ವದ ಅತ್ಯುತ್ತಮ ಮಾದರಿಯಾಗಿ ರೂಪಿಸುವ ಮಹತ್ವಾಕಾಂಕ್ಷೆ ಬಹಳ ಮೆಚ್ಚುಗೆಗೆ ಪಾತ್ರವಾಗುವಂತಹದ್ದು.

1986 ರ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆ ತನ್ನ ಪ್ರಸ್ತುತತೆ ಕಳೆದುಕೊಂಡಿದೆ ಎಂದು 1991 ರಲ್ಲಿ ತೀವ್ರವಾದ ಟೀಕೆಗಳು ಕೇಳಿ ಬಂದವು. ಆ ಹಿನ್ನೆಲೆಯಲ್ಲಿ, 1992 ರಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಾಯಿತು. ಆದರೆ, ಅದು ಇನ್ನೂ ಅಪೂರ್ಣ ಪ್ರಕ್ರಿಯೆಯಾಗಿ ಉಳಿದಿದೆ. ಈ ಹಿಂದೆ ಮಾಡಿದ ಅರೆಮನಸ್ಸಿನ ಮತ್ತು ವಿಫಲ ಪ್ರಯತ್ನಗಳಿಗೆ ಹೋಲಿಸಿದರೆ ದೃಢವಾದ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರತಿಪಾದಿಸುವ ಹೊಸ ಶಿಕ್ಷಣ ನೀತಿ ಹಲವು ಪಟ್ಟು ಉತ್ತಮವಾಗಿ ಇದೆ. ವಿವಿಧ ಅವಧಿಗಳಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ಇದು ಸಶಕ್ತವಾಗಿ ಕಾಣುತ್ತಿದೆ. ಶಿಕ್ಷಣ ಕ್ಷೇತ್ರ ಬಲಗೊಂಡರೆ, ಉತ್ಪಾದಕ ಪ್ರಕ್ರಿಯೆಗಳಲ್ಲಿ ಮಾನವ ಸಂಪನ್ಮೂಲಗಳ ಬಳಕೆ ಹೆಚ್ಚುತ್ತದೆ, ಇದರಿಂದ ದೇಶದ ಭವಿಷ್ಯ ಬದಲಾಗುತ್ತದೆ. ಹೊಸ ಪಠ್ಯಕ್ರಮದಿಂದಾಗಿ ಶಿಕ್ಷಣ ಪೂರ್ಣಗೊಳ್ಳುವ ಹೊತ್ತಿಗೆ, ಕೆಲವು ವೃತ್ತಿಯಲ್ಲಿ ವೃತ್ತಿಪರ ಕೌಶಲ್ಯ ಕಲಿಸುವ, ಮಾತೃಭಾಷೆಯಲ್ಲಿ ಬೋಧನೆ ಮಾಡುವ, ಹಾಗೂ ಪಠ್ಯಕ್ರಮದಲ್ಲಿ ಮಾರ್ಪಾಡು ತರುವ ಮೂಲಕ ಶಾಲಾ ಪುಸ್ತಕಗಳ ಭಾರವನ್ನು ಕಡಿಮೆ ಮಾಡುತ್ತದೆ, ಅಲ್ಲದೆ ಶಿಕ್ಷಣಕ್ಕೆ ಶೇಕಡಾ 6 ರಷ್ಟು ಜಿಡಿಪಿ ಹಂಚಿಕೆ ಮಾಡಲು ಹೊಸ ನೀತಿ ಅನುವು ಮಾಡಿಕೊಟ್ಟಿದೆ. ಸದೃಢ ಬುನಾದಿಯ ಮೇಲೆ ಸರ್ವರಿಗೂ ಶಿಕ್ಷಣ ದೊರೆಯುವಂತಾಗಲು ಬಜೆಟ್‌ನಲ್ಲಿ ಹಣದ ಉದಾರ ವಿನಿಯೋಗ ಅತ್ಯಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (ಜಿಡಿಪಿಯ ಶೇಕಡಾ 4.4) ಪ್ರಸ್ತುತ ಖರ್ಚು ಮಾಡುತ್ತಿರುವ ಮೊತ್ತಕ್ಕಿಂತಲೂ ಇನ್ನೂ 2.25 ಲಕ್ಷ ಕೋಟಿ ರೂ. ಹೆಚ್ಚು ವಿನಿಯೋಗ ಮಾಡಿದರೆ ಹೊಸ ಶಿಕ್ಷಣ ವ್ಯವಸ್ಥೆಯಿಂದ ಗುಣಾತ್ಮಕ ಪರಿವರ್ತನೆ ಸಾಧ್ಯ ಆಗಲಿದೆ.

ದೇಶದ ಪ್ರಾಥಮಿಕ ಶಿಕ್ಷಣ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಬಗ್ಗೆ ‘ಎ ಎಸ್ ಎ ಆರ್’ ವರದಿಗಳು ಟೀಕಿಸಿವೆ, ಆದರೆ ಉನ್ನತ ಶಿಕ್ಷಣ ಕೂಡ ಉತ್ತಮವಾಗಿಯೇನೂ ಇಲ್ಲ. ಹೆಚ್ಚಿನ ವಿದ್ಯಾರ್ಹತೆ ಇದ್ದಷ್ಟೂ, ನಿರುದ್ಯೋಗಿಗಳಾಗಿರುವವರ ಪ್ರಮಾಣ ಸಾಮಾನ್ಯವಾಗಿದೆ. ಇದಕ್ಕೆ ಸರಿಯಾದ ಮದ್ದು ಎಂದರೆ ಶಿಕ್ಷಣವನ್ನು ತಳಮಟ್ಟದಿಂದ ಸುಧಾರಿಸುವುದು , ಮಾತೃಭಾಷೆಯಲ್ಲಿ ಬೋಧನೆಗೆ ಆದ್ಯತೆ ನೀಡುವ ಮೂಲಕ, ಜರ್ಮನಿ, ಜಪಾನ್, ಇಟಲಿ ಮತ್ತು ಈಜಿಪ್ಟ್ ಉತ್ಪಾದಕತೆಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸುತ್ತಿವೆ. ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ತಮ್ಮದೇ ಭಾಷೆಯ ಮಹತ್ವವನ್ನು ಅರ್ಥಮಾಡಿಕೊಂಡಿವೆ. ಆದರೆ ಬಹುತೇಕ ರಾಜ್ಯಗಳು ಇಂಗ್ಲಿಷ್ ಮಾಧ್ಯಮ ಬೋಧನೆಗೆ ಅನಗತ್ಯ ಪ್ರಾಮುಖ್ಯತೆ ನೀಡುತ್ತಿರುವುದನ್ನು ನಾವು ನೋಡುತ್ತೇವೆ. ಇಂಗ್ಲಿಷ್ ನಿಯಮ ದೇಶದಿಂದ ಹೊರಟುಹೋದರೂ, ಆ ಭಾಷೆಯ ವ್ಯಾಮೋಹ ಬಹುಶಃ ಈ ನೆಲವನ್ನು ತೊರೆಯದು. ಹೊಸ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಮಾರ್ಗಸೂಚಿಗಳ ಪ್ರಕಾರ, ಮಾತೃಭಾಷೆ ಕುರಿತ ಸಂಕುಚಿತ ರಾಜಕಾರಣವನ್ನು ಬದಿಗಿಡಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು. ಐದನೇ ತರಗತಿಯವರೆಗೆ ಮಾತೃಭಾಷೆಯ ಮಾಧ್ಯಮದಲ್ಲಿ ಬೋಧನೆ ಮಾಡಬೇಕು. ಸಾಧ್ಯವಾದರೆ ಎಂಟನೆ ತರಗತಿಯವರೆಗೆ ತಾಯ್ನುಡಿಯಲ್ಲೇ ಬೋಧಿಸಲು ಮುಂದಾಗಬೇಕು. ಕೆಲವು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಉದ್ಯೋಗಾವಕಾಶ ಸಿಗುತ್ತದೆ ಎಂಬ ಏಕೈಕ ಭರವಸೆ ಮತ್ತು ನಂಬಿಕೆಯೊಂದಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾರೆ. ಮಾತೃಭಾಷೆಯಲ್ಲಿ ನಿರರ್ಗಳವಾಗಿ ಓದಲು ಮತ್ತು ಬರೆಯಲು ಬಲ್ಲವರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಮಗಳನ್ನು ಬದಲಾಯಿಸಬೇಕು. ಆಡಳಿತ ಪ್ರಕ್ರಿಯೆಯಲ್ಲಿ ಪತ್ರವ್ಯವಹಾರ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಾಗ ಮಾತೃಭಾಷೆಯನ್ನು ವ್ಯಾಪಕವಾಗಿ ಬಳಸಬೇಕು. ಆಗ ಮಾತ್ರ ಹೊಸ ಶಿಕ್ಷಣ ವ್ಯವಸ್ಥೆಯ ಪ್ರಮುಖ ಸುಧಾರಣೆಗಳು ಇಡೀ ರಾಷ್ಟ್ರವನ್ನು ವ್ಯಾಪಿಸುತ್ತವೆ ಮತ್ತು ಪ್ರೇರೇಪಿಸುತ್ತವೆ.

‘ದೇಶದಲ್ಲಿ ಶೇಕಡಾ 20 ರಷ್ಟು ಶಿಕ್ಷಕರು ಮತ್ತು ಶೇಕಡಾ 45 ರಷ್ಟು ಗುತ್ತಿಗೆ ಸಿಬ್ಬಂದಿಗೆ ಅಗತ್ಯ ತರಬೇತಿ ಇಲ್ಲ’. ಶಿಕ್ಷಕರಿಗೆ ಉನ್ನತ ಮಟ್ಟದ ತರಬೇತಿ ಮತ್ತು ಶಿಕ್ಷಣವನ್ನು ಒದಗಿಸಲು ಐ ಐ ಟಿಗಳು ಮತ್ತು ಐ ಐ ಎಂಗಳಿಗೆ ಸಮನಾದ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಯನ್ನು ಸ್ಥಾಪಿಸಬೇಕು ! ನೀತಿ ವಿನ್ಯಾಸವು ಒಂದು ಸಂಗತಿಯಾದರೆ ಅದರ ಪರಿಣಾಮಕಾರಿ ಅನುಷ್ಠಾನ ಮತ್ತೊಂದು ಮಹತ್ವದ ವಿಚಾರ. ಬಳಕೆಯಲ್ಲಿ ಇಲ್ಲದ ಶಿಕ್ಷಣ ವಿಧಾನಗಳು, ಅನರ್ಹ ಮತ್ತು ಅಸಮರ್ಥ ಶಿಕ್ಷಕರು, ಜೀವನೋಪಾಯಕ್ಕೆ ಒದಗಿ ಬರದ ಪದವಿಗಳು, ಪರೀಕ್ಷೆಯ ಒತ್ತಡಗಳು ಇತ್ಯಾದಿ ಕೊರತೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಇವೆ. ಈ ನ್ಯೂನತೆಗಳನ್ನು ಅರಿತು ಮುಂದಿನ ಪೀಳಿಗೆಯನ್ನು ಈ ಅಡ್ಡಿ ಆತಂಕಗಳಿಂದ ಮುಕ್ತಗೊಳಿಸಲು ಸರ್ಕಾರಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಹೊಸ ಶಿಕ್ಷಣ ನೀತಿಯ ಆಕಾಂಕ್ಷೆಗಳು ಮತ್ತು ಆಶಯಗಳನ್ನು ಪೂರೈಸಿಕೊಳ್ಳಲು ಭಾರತೀಯ ಶಿಕ್ಷಣಕ್ಕೆ ಸಾಧ್ಯ ಆಗುತ್ತದೆ.

ABOUT THE AUTHOR

...view details