ನವದೆಹಲಿ :ವಿದೇಶಿ ತಬ್ಲಿಘಿ ಜಮಾತ್ ಸದಸ್ಯರ ವೀಸಾಗಳನ್ನು ಈಗಾಗಲೇ ರದ್ದುಗೊಳಿಸಿರುವಾಗ ಅವರನ್ನು ಭಾರತದಲ್ಲಿ ಏಕೆ ಇರಿಸಿಕೊಳ್ಳಲಾಗಿದೆ ಎಂದು ಪ್ರಶ್ನಿಸಿ ಸುಪ್ರಿಂಕೋರ್ಟ್ ಕೇಂದ್ರಕ್ಕೆ ನೋಟಿಸ್ ನೀಡಿದೆ.
ವಿದೇಶಿಯರನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಸಾಮಾನ್ಯ ನಿರ್ದೇಶನ ನೀಡಲಾಗಿದೆಯೇ.. ಅವರ ವೀಸಾಗಳನ್ನು ರದ್ದುಮಾಡುವ ಆದೇಶಗಳನ್ನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಕಳುಹಿಸಲಾಗಿದೆಯೇ ಎಂದು ಸುಪ್ರೀಂಕೋರ್ಟ್ ಈ ನೋಟಿಸ್‌ನಲ್ಲಿ ಕೇಂದ್ರವನ್ನ ಪ್ರಶ್ನಿಸಿದೆ.
ವಿದೇಶಿ ತಬ್ಲಿಘಿಗಳಿಗೆ ವೀಸಾ ರದ್ಧತಿ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ ಮತ್ತು ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಸಾಂವಿಧಾನಿಕ ಪೀಠವು ಜುಲೈ 2ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೋರಿದೆ.
ವೀಸಾ ರದ್ಧತಿ ಅಥವಾ ಕಪ್ಪುಪಟ್ಟಿಗೆ ಸೇರಿಸಿರುವ ಬಗ್ಗೆ ವಿದೇಶಿ ತಬ್ಲಿಘಿಗಳಿಗೆ ಪ್ರತ್ಯೇಕ ಆದೇಶವನ್ನೇನೂ ನೀಡಿಲ್ಲ. ಅವರ ಪಾಸ್‌ಪೋರ್ಟ್‌ಗಳನ್ನು ಮಾತ್ರ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.