ನವದೆಹಲಿ: ಪ್ರಧಾನಿ ಮೋದಿ ಮಹತ್ವದ ವಿಚಾರವನ್ನು ದೇಶದ ಮುಂದಿಡುವುದಾಗಿ ಟ್ವೀಟ್ ಮಾಡಿದ್ದು ಇಂದು ಬೆಳಗ್ಗೆ ನಿದ್ದೆಗಣ್ಣಲ್ಲಿದ್ದ ಹಲವಾರು ಮಂದಿಯನ್ನು ಬಡಿದೆಬ್ಬಿಸಿತ್ತು.
ಮಧ್ಯಾಹ್ನ 12.30ರ ಸುಮಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ತರ ಸಾಧನೆ ಮಾಡಿದೆ. ಮಿಷನ್ ಶಕ್ತಿ ಹೆಸರಿನ ಈ ಆಪರೇಷನ್ ಕ್ರೆಡಿಟ್ ಸಂಪೂರ್ಣ ಡಿಆರ್ಡಿಒ ವಿಜ್ಞಾನಿಗಳಿಗೆ ಸಲ್ಲಬೇಕು ಎಂದು ಹೇಳುತ್ತಾ ಮುಂದುವರೆದರು. ಅಷ್ಟಕ್ಕೂ ಮಿಷನ್ ಶಕ್ತಿ ಏನು ಎಂದು ಹುಡುಕುತ್ತಾ ಸಾಗಿದಾಗ ಯುಪಿಎ ಸರ್ಕಾರ ಅವಧಿಗೆ ತೆರಳುತ್ತದೆ. ಮಿಷನ್ ಶಕ್ತಿ ಏನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ...
ಡಿಆರ್ಡಿಒದ ವಿಜ್ಞಾನಿಗಳ ತಂಡ ಕೇವಲ ಮೂರು ನಿಮಿಷದಲ್ಲಿ ಆ್ಯಂಟಿ ಸ್ಯಾಟಲೈಟ್ ಮೂಲಕ ಕಾರ್ಯನಿರತ ಸ್ಯಾಟಲೈಟ್ ಒಂದನ್ನು ಹೊಡೆರುಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಕಾಣಿಸಿಕೊಂಡಿದೆ. ಈಗಾಗಲೇ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಈ ಇದನ್ನು ಸಾಧಿಸಿ ತೋರಿಸಿವೆ.
ಎ-ಸ್ಯಾಟ್ ನಿರ್ಮಾಣ ಹಾಗೂ ಆ ಬಗೆಗಿನ ಪ್ರಕ್ರಿಯೆಗಳು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆರಂಭವಾಗಿತ್ತು ಎನ್ನುವುದನ್ನು ಕಾಂಗ್ರೆಸ್ ಮೋದಿ ಭಾಷಣದ ಬಳಿಕ ಹೇಳಿಕೊಂಡಿದೆ. ಎ-ಸ್ಯಾಟ್ ಪ್ರಾಜೆಕ್ಟ್ ಯುಪಿಎ ಸರ್ಕಾರದ್ದು ಎಂದು ಕೈ ನಾಯಕರು ಟ್ವೀಟ್ ಮಾಡಿದ್ದಾರೆ. ಎ-ಸ್ಯಾಟ್ ಪ್ರಾಜೆಕ್ಟ್ 2010ರ ವೇಳೆ ಆರಂಭವಾಗಿತ್ತು, 2012ರ ಬಳಿಕ ಪ್ರಾಜೆಕ್ಟ್ ವೇಗ ಪಡೆದಿತ್ತು.
ಏನಿದು ಆ್ಯಂಟಿ ಸ್ಯಾಟಲೈಟ್(ಎ-ಸ್ಯಾಟ್):
ಆ್ಯಂಟಿ ಸ್ಯಾಟಲೈಟ್ ಕೆಳಸ್ಥರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿರೋಧಿ ರಾಷ್ಟ್ರಗಳು ಯುದ್ಧೋದ್ದೇಶದಿಂದ ಉಡ್ಡಯನ ಮಾಡಿರುವ ಉಪಗ್ರಹಗಳನ್ನ ಹೊಡೆದು ಹಾಕುವ ವ್ಯವಸ್ಥೆ ಆಗಿದೆ. ಎ-ಸ್ಯಾಟ್ಗಳು ಕಾರ್ಯದಲ್ಲಿರುವ ಅಥವಾ ನಿಷ್ಕ್ರಿಯಗೊಂಡಿರುವ ಸ್ಯಾಟಲೈಟ್ಗಳನ್ನು ಗುರಿಯಿಟ್ಟು ಹೊಡೆಯಲೆಂದೇ ನಿರ್ಮಾಣ ಮಾಡಿರುವ ವ್ಯವಸ್ಥೆ ಆಗಿದೆ. ಈ ಎ - ಸ್ಯಾಟ್ ಪರೀಕ್ಷೆಯನ್ನು ಭಾರತ ನಡೆಸಿ ಇಂದು ಯಶಸ್ವಿಯಾಗಿದೆ. ಬಾಹ್ಯಾಕಾಶ ಹಾಗೂ ಭದ್ರತಾ ವಿಚಾರದಲ್ಲಿ ಇದು ಬಹುದೊಡ್ಡ ಗೆಲುವು ಎಂದೇ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಎ-ಸ್ಯಾಟ್ ಸಂಫೂರ್ಣ ಭಾರತೀಯ ನಿರ್ಮಿತ ಎನ್ನುವುದು ಮತ್ತೊಂದು ಗಮನಾರ್ಹ ಸಂಗತಿ.
ಮತ್ತೊಂದು ಮಹತ್ವದ ವಿಚಾರವೆಂದರೆ ಎ-ಸ್ಯಾಟ್ಗಳನ್ನು ಯುದ್ಧದ ಸಂದರ್ಭದಲ್ಲಿ ಬಳಸಬಹುದು. ಆದರೆ ಇಲ್ಲಿಯವರೆಗೂ ಎ-ಸ್ಯಾಟ್ಗಳನ್ನು ಬಳಿಸಿದ ಉದಾಹರಣೆಗಳಿಲ್ಲ. ಇಂದಿನ ಭಾಷಣದಲ್ಲಿ ಮೋದಿ ಸಹ ಭಾರತ ಮೊದಲಾಗಿ ಎ-ಸ್ಯಾಟ್ಗಳನ್ನು ಯುದ್ಧದಲ್ಲಿ ಬಳಕೆ ಮಾಡುವುದಿಲ್ಲ ಎಂದು ವಿಶ್ವಕ್ಕೆ ಸ್ಪಷ್ಟನೆ ನೀಡಿದ್ದಾರೆ.