ಲಖನೌ (ಉತ್ತರ ಪ್ರದೇಶ): ಲಾಕ್ಡೌನ್ ಉಲ್ಲಂಘಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕರೆತಂದು ಪೊಲೀಸ್ ಠಾಣೆಯಲ್ಲಿ ಡಾನ್ಸ್ ಮಾಡಿಸಿದ್ದ ಆರೋಪದಲ್ಲಿ ಪೊಲೀಸ್ ಅಧಿಕಾರಿ ಎತ್ತಂಗಡಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಠಾಣೆಯಲ್ಲಿ ''ತೇರಿ ಆಂಕೋನ್ ಕಾ ಯಾ ಕಾಜಲ್'' ಹಾಡಿಗೆ ಸ್ಟೆಪ್ಸ್ : ಪೊಲೀಸರ ಅಮಾನತು..!
ಲಾಕ್ಡೌನ್ ಉಲ್ಲಂಘಿಸಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನಿಂದ ಡಾನ್ಸ್ ಮಾಡಿಸಿದ್ದ ಪೊಲೀಸ್ ಅಧಿಕಾರಿ ಹಾಗೂ ಪೇದೆಯನ್ನು ಉತ್ತರ ಪ್ರದೇಶದಲ್ಲಿ ಅಮಾನತು ಮಾಡಲಾಗಿದೆ.
ಇಲ್ಲಿನ ಇತವಾ ಜಿಲ್ಲೆಯ ನಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನನ್ನು ಲಾಕ್ಡೌನ್ ಉಲ್ಲಂಘನೆಯ ಆರೋಪದಲ್ಲಿ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಠಾಣೆಯಲ್ಲಿನ ಪೊಲೀಸ್ ಸಿಬ್ಬಂದಿ ಆ ವ್ಯಕ್ತಿಯಿಂದ ಹರಿಯಾಣ ಮೂಲದ ಡಾನ್ಸರ್ ಸಪ್ನಾ ಚೌಧರಿ ಕುಣಿದಿದ್ದ ''ತೇರಿ ಆಂಕೋನ್ ಕಾ ಯಾ ಕಾಜಲ್'' ಎಂಬ ಹಾಡಿಗೆ ಡಾನ್ಸ್ ಮಾಡಿಸಿದ್ದರು.
2.20 ನಿಮಿಷ ಇರುವ ಈ ವಿಡಿಯೋದಲ್ಲಿ ಪೊಲೀಸ್ ಪೇದೆಯೊಬ್ಬರು ಹಾಡಿನ ಮಧ್ಯೆ ವ್ಯಕ್ತಿಯನ್ನು ಥಳಿಸುತ್ತಿರುವುದು ಕೂಡಾ ಕಂಡುಬಂದಿತ್ತು. ಈ ವಿಡಿಯೋ ಸಮಾಜವಾದಿ ಪಕ್ಷದ ಟ್ವಿಟರ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಠಾಣೆಯ ಉಸ್ತುವಾರಿ ಅಧಿಕಾರಿ ಹಾಗೂ ಪೇದೆಯನ್ನು ಅಮಾನತು ಮಾಡಿ ಉಳಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ.