ಪುರಿ(ಒಡಿಶಾ): ವಿಶ್ವವಿಖ್ಯಾತ ಹಾಗೂ ಶತಮಾನಗಳ ಇತಿಹಾಸ ಹೊಂದಿರುವ ಜಗನ್ನಾಥನ ಸನ್ನಿಧಿಯಲ್ಲಿ ನಡೆಯಲಿರುವ ರಥಯಾತ್ರೆ (ಕಾರ ಹಬ್ಬ) ಮೇಲೆ ಕೋವಿಡ್-19 ಕರಿಛಾಯೆ ಆವರಿಸಿದೆ.
ರಥಯಾತ್ರೆಗೆ ಪುರಿಯಲ್ಲಿರುವ ಜಗನ್ನಾಥ ದೇವಾಲಯಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಬರುತ್ತಾರೆ. ಈ ಬಾರಿಯೂ ರಥದಲ್ಲಿ ದೇವರ ಮೂರ್ತಿ ಇರಿಸಿ ನಡೆಯುವ ಮೆರವಣಿಗೆ ಕಣ್ತುಂಬಿಕೊಳ್ಳಲು ಅದೆಷ್ಟೋ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ನೋಡಿದಾಗ ಈ ಬಾರಿ ರಥಯಾತ್ರೆ ನಡೆಯುತ್ತೋ, ಇಲ್ಲವೋ ಎಂಬ ಹತ್ತಾರು ಪ್ರಶ್ನೆಗಳು ಲಕ್ಷಾಂತರ ಮಂದಿ ಭಕ್ತರನ್ನು ಕಾಡುತ್ತಿವೆ.
ಕೊರೊನಾ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾಂಪ್ರದಾಯಿಕ ಹಬ್ಬವನ್ನು ಆಚರಿಸುವುದಾದ್ರೂ ಹೇಗೆ? ಅನುಮತಿ ಸಿಕ್ಕಿದ್ದೇ ಆದ್ರೆ ಲಕ್ಷಾಂತರ ಮಂದಿ ರಥಯಾತ್ರೆ ಕಣ್ತುಂಬಿಕೊಳ್ಳಲು ಇಲ್ಲಿನ ರಸ್ತೆಗಳಲ್ಲಿ ಜಮಾಯಿಸುತ್ತಾರೆ. ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗುತ್ತದೆ.
ಇಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಇಲ್ಲದಿದ್ದರೆ ಸೋಂಕು ಹರಡುವ ಸಾಧ್ಯತೆ ಇದೆ. ಈ ಎಲ್ಲಾ ಅಂಶಗಳನ್ನು ಗಮಿಸಿದಾಗ ಹಿಂದಿನ ವರ್ಷದಂತೆಯೇ ಈ ಬಾರಿ ರಥಯಾತ್ರೆ ಅದ್ಧೂರಿಯಾಗಿ ನಡೆಯೋದು ಅನುಮಾನ ಅಂತಲೇ ಹೇಳಲಾಗುತ್ತಿದೆ.