ನವದೆಹಲಿ:ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೊಚ್ಚಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದು, ಈ ವೇಳೆ ನಡೆದ ರೋಡ್ ಶೋ, ತಾಜಮಹಲ್ ಭೇಟಿ, ಸಬರಮತಿ ಆಶ್ರಮ ಭೇಟಿ, ನಮಸ್ತೆ ಟ್ರಂಪ್ ಸೇರಿದಂತೆ ಇತರ ಕಾರ್ಯಕ್ರಮಗಳ ಕುರಿತು ಅಮೆರಿಕ ಮಾಧ್ಯಮಗಳು ತಮ್ಮದೇ ಆದ ನೋಟದಲ್ಲಿ ವರದಿ ಮಾಡಿವೆ.
'ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯು ''ಅಮೆರಿಕ ಭಾರತವನ್ನು ಪ್ರೀತಿಸುತ್ತದೆ’ ಎಂದು ಮೋದಿಯೊಂದಿಗೆ ಸಮಾವೇಶದಲ್ಲಿ ಟ್ರಂಪ್ ಘೋಷಿಸಿದರು'' ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದೆ
ಅಧ್ಯಕ್ಷ ಟ್ರಂಪ್‌ಗೆ ಗಾಯನ, ನರ್ತದ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಜನರು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು. ಇಬ್ಬರೂ ನಾಯಕರು ಸಮಾವೇಶದಲ್ಲಿನ ಜನರ ಬೆಂಬಲಕ್ಕೆ ಮಾರುಹೋದರು. 'ಅಮೆರಿಕ ಭಾರತವನ್ನು ಪ್ರೀತಿಸುತ್ತದೆ, ಗೌರವಿಸುತ್ತದೆ. ಅಮೆರಿಕ ಭಾರತಕ್ಕೆ ಯಾವಾಗಲೂ ನಂಬಿಕಸ್ಥ ಮತ್ತು ನಿಷ್ಠಾವಂತ ಮಿತ್ರರಾಷ್ಟ್ರವಾಗಿ ಇರಲಿದೆ' ಎಂಬ ಟ್ರಂಪ್ ಅವರ ನುಡಿ ಉಲ್ಲೇಖಿಸಿದೆ.
'ಸಿಎನ್ಎನ್' ಮಾಧ್ಯಮದ ವರದಿಯು 'ಟ್ರಂಪ್ ಅವರ ತಾಜ್ ಮಹಲ್ ಪ್ರವಾಸ, ಭಾರತ ಭೇಟಿಯಲ್ಲಿ ಬೃಹತ್ ಜನಸಂದಣಿ ಗಮನ ಸೆಳೆಯಿತು' ಎಂಬ ಶೀರ್ಷಿಕೆಯಡಿ ವರದಿ ಮಾಡಿದೆ. ಪ್ರಧಾನಿ ಮೋದಿ ಅವರು ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರನ್ನು ರೆಡ್ ಕಾರ್ಪೆಟ್ ಮುಖೇನ ಸ್ವಾಗತಿಸಿದರು. ಇಬ್ಬರೂ ನಾಯಕರು ಮೊಟೆರಾ ಕ್ರೀಡಾಂಗಣದಲ್ಲಿ ನೆರದ ಬೃಹತ್ ಜನದಟ್ಟಣೆ ಉದ್ದೇಶಿಸಿ ಮಾತನಾಡಿದರು ಎಂದು ಪ್ರಕಟಿಸಿದೆ.