ಟೋಕಿಯೋ(ಜಪಾನ್) :ಜಪಾನ್ನಲ್ಲಿ ಕೊರೊನಾ ವೈರಸ್ ಹರಡುತ್ತಿದೆ. ಇದರಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಒಲಿಂಪಿಕ್ ಕ್ರೀಡೆಗಳು ಆಗಲೂ ನಡೆಯುವುದು ಸಂದೇಹ ಎಂದು ಟೋಕಿಯೊ ಗೇಮ್ಸ್ನ ಸಿಇಒ ಅಭಿಪ್ರಾಯಪಟ್ಟಿದ್ದಾರೆ.
ಜಪಾನ್ ಪ್ರಧಾನಿ ಶಿಂಜೋ ಅಬೆ ಈಗಾಗಲೇ ಆ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಕೊರೊನಾ ಹರಡದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಟೋಕಿಯೊ ಒಲಿಂಪಿಕ್ ಆರ್ಗನೈಸಿಂಗ್ ಕಮಿಟಿ ಸಿಇಒ ತೋಶಿರೋ ಮುಟೋ, ಮುಂದಿನ ಜುಲೈವರೆಗೆ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುವುದಿಲ್ಲ.
ಯಾವುದಕ್ಕೂ ನಿರ್ದಿಷ್ಟವಾದ ಉತ್ತರ ನೀಡಲು ಸಾಧ್ಯವಾಗುವುದಿಲ್ಲ ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ಟೋಕಿಯೊ ಒಲಿಂಪಿಕ್ ಕ್ರೀಡಾಕೂಟ ಹಿಂದಿನ ತಿಂಗಳು ಕೊರೊನಾ ವೈರಸ್ ಕಾರಣಕ್ಕೆ ಮುಂದೂಡಿಕೆಯಾಗಿತ್ತು. ಜುಲೈ 23, 2021ರಲ್ಲಿ ನಡೆಸಬೇಕು ಎಂದು ತೀರ್ಮಾನಿಸಲಾಗಿತ್ತು. ಇದಾದ ನಂತರ ಅಗಸ್ಟ್ 24ರಂದು ಪ್ಯಾರಾಲಿಂಪಿಕ್ ಕ್ರೀಡೆಗಳನ್ನೂ ಆಯೋಜಿಸಲು ತೀರ್ಮಾನ ಮಾಡಲಾಗಿತ್ತು. ಆದರೆ, ಕೊರೊನಾ ಮಹಾಮಾರಿಯ ಕಾರಣಕ್ಕೆ ಆ ಕ್ರೀಡಾಕೂಟಗಳು ನಡೆಯುವುದು ಕಷ್ಟ ಎನ್ನಲಾಗುತ್ತಿದೆ.
ಇನ್ನೊಂದೆಡೆ ಶಿಂಜೋ ಅಬೆ ಮೇಲೆ ಕೊರೊನಾ ಸೋಂಕಿನ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಲ್ಲಿನ ವಿರೋಧಪಕ್ಷದವರು ಆರೋಪ ಮಾಡುತ್ತಿದ್ದಾರೆ. ಇದರಿಂದಾಗಿ ಮತ್ತೆ ಒಂದು ವರ್ಷ ಒಲಿಂಪಿಕ್ ಮುಂದೂಡುವ ಸಾಧ್ಯತೆ ಇದೆ ಎಂದು ಮುಟೋ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಒಲಿಂಪಿಕ್ ಜ್ಯೋತಿಯ ಓಟವನ್ನು ನಿಲ್ಲಿಸಲಾಗಿದೆ. ಅದನ್ನು ಮ್ಯಾನೇಜ್ಮೆಂಟ್ ಆಫ್ ಟೋಕಿಯೊ-2020ಗೆ ನೀಡಲಾಗಿದೆ. ಒಲಿಂಪಿಕ್ ಮುಂದೂಡಿಕೆಯ ಕಾರಣದಿಂದ 2 ಬಿಲಿಯನ್ ಡಾಲರ್ನಿಂದ 6 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.