ಮೊರೆನಾ (ಮಧ್ಯಪ್ರದೇಶ):ಬ್ರಿಟಿಷ್ ವಿನ್ಯಾಸಕಾರರಾದ ಎಡ್ವಿನ್ ಲ್ಯೂಟನ್ಸ್ ಹಾಗೂ ಹರ್ಬಟ್ ಬೇಕರ್ ಅವರ ತಂಡ ವಿನ್ಯಾಸಗೊಳಿಸಿದ್ದ ಸಂಸತ್ ಭವನ ವಾಸ್ತು ಶಿಲ್ಪದ ಹಿಂದೆ ಮಧ್ಯಪ್ರದೇಶದ ಮೊರೆನಾ ಸಮೀಪದ ಚಂಬಲ್ ಕಣಿವೆಯಲ್ಲಿನ ಶಿವ- ಯೋಗಿನಿ ದೇಗುಲದ ವಿನ್ಯಾಸವೇ ಪ್ರೇರಣೆ ನೀಡಿರಬಹುದೆಂದು ಪುರಾತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಂಬಲ್ ಕಣಿವೆಯ ಕಂದರಗಳಿಂದ ಆವೃತವಾದ ಬೆಟ್ಟದ ಮೇಲೆ ಹಿಂದೂ ಆರಾಧ್ಯ ದೈವ ಶಿವನಿಗೆ ಅರ್ಪಿತವಾದ ದೇವಾಲಯ ಇದಾಗಿದೆ. ಈ ದೇವಾಲಯವನ್ನು 101 ಕಲ್ಲಿನ ಕಂಬಗಳಲ್ಲಿ ನಿರ್ಮಿಸಲಾಗಿದ್ದು, ವೃತ್ತಾಕಾರದ ದೇಗುಲದ ಸಂಕೀರ್ಣವು 64 ಕೋಣೆಗಳಿದ್ದು, ಪ್ರತಿಯೊಂದರಲ್ಲಿ ಶಿವಲಿಂಗ ಮತ್ತು ಯೋಗಿನಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕೇಂದ್ರ ಕಾಂಪೌಂಡ್ನ ಬೃಹತ್ ದೇವಾಲಯ ಹೊಂದಿರುವ ವಾಸ್ತುಶಿಲ್ಪ ಇದರದ್ದಾಗಿದೆ.
ತಾಂತ್ರಿಕ ಆಚರಣೆಗಳ ಕೇಂದ್ರವಾಗಿತ್ತು ಎಂದು ಹೇಳಲಾಗುವ ಈ ದೇವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನೋಡಿಕೊಳ್ಳುತ್ತಿದೆ. ಈ ಹಿಂದೆ ಈ ದೇವಾಲಯ ತಾಂತ್ರಿಕ ಅಧ್ಯಯನಗಳ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸಿತ್ತು. ದೇವಾಲಯವು ನಿಗೂಢವಾದ ಶಕ್ತಿಗಳನ್ನು ಹೊಂದಿದೆ. ಜನರು ತಮ್ಮ ತಾಂತ್ರಿಕ ಆಚರಣೆಗಳನ್ನು ನೆರವೇರಿಸಿಕೊಳ್ಳಲು ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಇದು ಪುರಾತತ್ವದಲ್ಲಿ ಇರುವ ಅದ್ಭುತವಾದ ದೇಗುಲವಾಗಿದೆ ಎಂದು ಜಿಲ್ಲಾ ಪುರಾತತ್ವ ಅಧಿಕಾರಿ ಅಶೋಕ್ ಶರ್ಮಾ ಹೇಳಿದರು.
ದೇವಾಲಯದ ವಾಸ್ತುಶಿಲ್ಪದ ವಿನ್ಯಾಸವು ಸಂಸತ್ತಿನ ವಿನ್ಯಾಸದ ಹಿಂದಿನ ಪ್ರೇರಣೆಯಾಗಿದೆ. ಸರ್ ಎಡ್ವಿನ್ ಲೂಟಿಯೆನ್ಸ್ ಅವರ ತಂಡವು ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ ರಚನೆಯ ರೇಖಾಚಿತ್ರಗಳನ್ನು ರಚಿಸಿತ್ತು. ನಂತರ ದೆಹಲಿಯಲ್ಲಿ ಸಂಸತ್ ಭವನ ನಿರ್ಮಾಣಕ್ಕೆ ಇದನ್ನೇ ಪ್ರೇರಣೆ ಮಾಡಿಕೊಂಡಿದ್ದರು ಎಂದರು.
ಇದು ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದಲ್ಲಿರುವ ಮಿಥಾವ್ಲಿ ಗ್ರಾಮದ ಸಮೀಪದಲ್ಲಿದೆ. ರಿಥೋರಾ ಪ್ರದೇಶದಲ್ಲಿರುವ ಈ ದೇವಾಲಯವನ್ನು ಪ್ರತಿಹಾರ ದೊರೆಗಳು ನಿರ್ಮಿಸಿದ್ದರು.