ಹೈದರಾಬಾದ್ :ಉಭಯ ದೇಶಗಳ ನಡುವೆ ಶಾಂತಿ ಸಂದೇಶ ಸಾರಲು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 1999ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಬಸ್ನಲ್ಲಿ ತೆರಳಿದ್ದರು. ಆದರೆ ಅದೇ ವೇಳೆ ಪಾಕಿಸ್ತಾನ ಸೇನೆ ಕಾರ್ಗಿಲ್‌ನಲ್ಲಿ ನುಸುಳುವ ಯೋಜನೆಯನ್ನು ಸಿದ್ಧಪಡಿಸಿಟ್ಟುಕೊಂಡಿತ್ತು. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್ ನಡುವಿನ ಒಂದು ದೂರವಾಣಿ ಸಂಭಾಷಣೆಯು, ಪಾಕಿಸ್ತಾನದ ಕುತಂತ್ರ ಮತ್ತು ಸುಳ್ಳು ಹೇಳಿಕೆಗಳನ್ನು ಬಹಿರಂಗ ಪಡಿಸಿತು. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ನ ಕರಾಳ ಮುಖ ಬಯಲಾಯಿತು.
ದೂರವಾಣಿಯ ಸಂಭಾಷಣೆ ಬಿಚ್ಚಿಟ್ಟ ಸತ್ಯ :
ಚೀನಾ ಪ್ರವಾಸದಲ್ಲಿದ್ದ ಆಗಿನ ಪಾಕ್ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ಮತ್ತು ರಾವಲ್ಪಿಂಡಿಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಅಜೀಜ್ ಖಾನ್ ಮೊದಲ ಸಂಭಾಷಣೆ 26 ಮೇ 1999 ರಂದು ನಡೆದಿದೆ. ಇವರಿಬ್ಬರ ನಡುವಿನ ಎರಡನೇ ಸಂಭಾಷಣೆ 29 ಮೇ 1999 ರಂದು ನಡೆದಿದೆ.
ಸಂಭಾಷಣೆಯ ಪ್ರತಿಲೇಖನವನ್ನು ಪಾಕಿಸ್ತಾನದ ಉದ್ದೇಶಗಳ ಬಗ್ಗೆ ಜಗತ್ತಿಗೆ ತಿಳಿಸಲು ಜೂನ್ 11 ರಂದು ಭಾರತ ಸರ್ಕಾರ ಬಿಡುಗಡೆ ಮಾಡಿತು. ಇವುಗಳನ್ನು ಬಹಿರಂಗಪಡಿಸುವ ಸುಮಾರು ಒಂದು ವಾರದ ಮೊದಲು, ಟೇಪ್‌ಗಳ ಪ್ರತಿಗಳನ್ನು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌ಗೆ ರಾಜತಾಂತ್ರಿಕ ಬ್ಯಾಕ್ ಚಾನೆಲ್ ಮೂಲಕ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.