ಕರ್ನಾಟಕ

karnataka

ETV Bharat / bharat

ವರ್ಣಭೇದದ ಬೆಂಕಿ: ತಳಮಳಿಸುತ್ತಿರುವ ಜಗತ್ತಿನ ಶಕ್ತಿಶಾಲಿ ದೇಶ - ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಹಾನುಭೂತಿ ಸೂಚಿಸಿದ್ದರಾದರೂ, ಗಲಭೆ ನಿಲ್ಲಿಸದಿದ್ದರೆ ಸೇನೆಯನ್ನು ಕಳಿಸಿ ಹತ್ತಿಕ್ಕುವುದಾಗಿ ಚುನಾವಣಾ ಸಂದರ್ಭದಲ್ಲಿಯೇ ಬೆದರಿಕೆ ಹಾಕುವ ಮೂಲಕ, ತನ್ನ ಪೊಲೀಸರ ಅಪರಾಧ ಮನಃಸ್ಥಿತಿಯನ್ನೇ ತಾವೂ ಹೊಂದಿರುವುದನ್ನು ತೋರಿಸಿಕೊಟ್ಟಿದ್ದಾರೆ.

The boiling superpower
ಅಮೆರಿಕಾದಲ್ಲಿ ಜನಾಂಗೀಯ ಸಂಘರ್ಷ

By

Published : Jun 4, 2020, 5:09 PM IST

ಹೈದರಾಬಾದ್:“ಕರಿಯ ವ್ಯಕ್ತಿ ಪೊಲೀಸರನ್ನು ಎದುರು ಹಾಕಿಕೊಂಡರೆ, ಆತ ಅಥವಾ ಆಕೆ ತನ್ನ ಜೀವ ಅಥವಾ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಪಕ್ಕಾ…’ 2016ರಲ್ಲಿ ಆಫ್ರೊ-ಅಮೆರಿಕನ್ (ಆಫ್ರಿಕಾ-ಅಮೆರಿಕ) ವ್ಯಕ್ತಿಯೊಬ್ಬ ಇಂಥದೊಂದು ತಳಮಳವನ್ನು ಟ್ವಟರ್‌ನಲ್ಲಿ ಹಂಚಿಕೊಂಡಿದ್ದ. ಬರಾಕ್ ಒಬಾಮ ಅಧ್ಯಕ್ಷತೆ ಮುಗಿದ ಕೂಡಲೇ ಅಮೆರಿಕದಲ್ಲಿ ಕರಿಯರ ಮೇಲೆ ದೌರ್ಜನ್ಯ ಶುರುವಾಗಿದೆ. ಕರಿಯ ಯುವಜನತೆಯನ್ನು ಪೊಲೀಸರು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂಬುದಕ್ಕೆ ಮಿನ್ನೆಸೊಟಾ ಮತ್ತು ಲೌಸಿಯಾನಾದಲ್ಲಿ ಇತ್ತೀಚೆಗೆ ನಡೆದ ಘಟನೆಯು ಅಪರಾಧ ನ್ಯಾಯ ವ್ಯವಸ್ಥೆಯ ವಿಸ್ತೃತ ಜನಾಂಗೀಯ ದುರ್ಬಳಕೆಗೆ ನಿದರ್ಶನವಾಗಿದೆ.

ಪೊಲೀಸರಿಂದ ನಡೆಯುವ ದೌರ್ಜನ್ಯ ಪ್ರಕರಣದಲ್ಲಿ ಕರಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಹಾನುಭೂತಿ ಸೂಚಿಸಿದ್ದರಾದರೂ, ಗಲಭೆ ನಿಲ್ಲಿಸದಿದ್ದರೆ ಸೇನೆಯನ್ನು ಕಳಿಸಿ ಹತ್ತಿಕ್ಕುವುದಾಗಿ ಚುನಾವಣಾ ಸಂದರ್ಭದಲ್ಲಿಯೇ ಬೆದರಿಕೆ ಹಾಕುವ ಮೂಲಕ, ತನ್ನ ಪೊಲೀಸರ ಅಪರಾಧ ಮನಃಸ್ಥಿತಿಯನ್ನೇ ತಾವೂ ಹೊಂದಿರುವುದನ್ನು ತೋರಿಸಿಕೊಟ್ಟಿದ್ದಾರೆ.

ಹಿಂದೆ 1968ರಲ್ಲಿ ಕಿರಿಯ ಮಾರ್ಟಿನ್ ಲೂಥರ್ ಕಿಂಗ್ ಅವರ ಹತ್ಯೆಯಾದಾಗ ಆಸ್ಫೋಟಗೊಂಡಿದ್ದ ಹಿಂಸಾಚಾರ ಕೂಡಾ ಇಂಥದೇ ಸೂಕ್ಷ್ಮ ಕಾರಣ ಹೊಂದಿದ್ದು, ಆಗ ಹಲವಾರು ನಗರಗಳಿಗೆ ಹರಡಿತ್ತು. ಈ ಸಲ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್‌ನ ಕೊಲೆಯಾಗಿದೆ ಎಂಬುದನ್ನು ಮರಣೋತ್ತರ ವರದಿ ದೃಢಪಡಿಸುವುದಕ್ಕೂ ಮುನ್ನವೇ - ಪೊಲೀಸನೊಬ್ಬ ಆತನ ಕತ್ತಿನ ಮೇಲೆ ತನ್ನ ಮೊಳಕಾಲನ್ನಿಟ್ಟು ಒತ್ತಿ ಹಿಡಿಯುವ ಮೂಲಕ ಪಾದಚಾರಿ ಮಾರ್ಗದ ಮೇಲೆಯೇ ಹೇಗೆ ಕೊಲೆ ಮಾಡಿದ ಎಂಬುದನ್ನು ಇಡೀ ಜಗತ್ತು ನೋಡಿಯಾಗಿತ್ತು!

2014ರಲ್ಲಿ ಕರಿಯ ವ್ಯಕ್ತಿ ಎರಿಕ್ ಗಾರ್ನರ್ ಎಂಬಾತನನ್ನು ನ್ಯೂಯಾರ್ಕ್ ನಗರದ ಪೊಲೀಸರು ಬಂಧಿಸಿದಾಗ, ಆತನನ್ನೂ ಹೀಗೇ ಗಟ್ಟಿಯಾಗಿ ಒತ್ತಿ ಹಿಡಿದಿದ್ದರು. ’ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂದು ಚೀರಿದ್ದ ಎರಿಕ್ ಹಾಗೇ ಮೃತಪಟ್ಟಿದ್ದ. ಫ್ಲಾಯ್ಡ್‌ನ ಕೊನೆಯ ಮಾತೂ ಅದೇ ಆಗಿದ್ದು, ’ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ’ ಎಂಬುದು ಈಗ ಘೋಷಣೆಯಂತೆ, ರಣಘೋಷದಂತೆ ಮೊಳಗುವ ಮೂಲಕ ಕೇವಲ ಅಮೆರಿಕಾವೊಂದೇ ಅಲ್ಲ, ಲಂಡನ್, ಬರ್ಲಿನ್‌ನಂತಹ ನಗರಗಳಲ್ಲಿಯೂ ಹಿಂಸಾಚಾರ ಸ್ಫೋಟಗೊಳ್ಳಲು ಕಾರಣವಾಗಿದೆ. ಪ್ರತಿಭಟನಕಾರರನ್ನು ಕೇಡಿಗಳು ಮತ್ತು ಲೂಟಿಕೋರರು ಎಂದು ಆರೋಪಿಸಿದ್ದಲ್ಲದೇ ಅವರ ಅಪರಾಧಗಳಿಗೆ ಗುಂಡುಗಳೇ ಉತ್ತರ ನೀಡಲಿವೆ ಎಂಬ ಅಧ್ಯಕ್ಷ ಟ್ರಂಪ್‌ನ ಜನಾಂಗೀಯ ಧೋರಣೆಯ ಹೇಳಿಕೆ ಪ್ರತಿಭಟನೆಯ ಬೆಂಕಿಗೆ ಎಣ್ಣೆ ಸುರಿದಂತೆ ಮಾಡಿದೆ.

ಎಲ್ಲಾ ಮನುಷ್ಯರು ಸಮಾನರು ಎಂಬ ಅಮೆರಿಕದ ಸ್ವಾತಂತ್ರ್ಯ ಹೇಳಿಕೆ ಹೊರಬಿದ್ದು ಹತ್ತಿರ ಎರಡೂವರೆ ಶತಮಾನಗಳು ಕಳೆದಿವೆ. ’ಅನ್ಯಾಯ ಎಲ್ಲೇ ನಡೆದಿರಲಿ, ಉಳಿದೆಲ್ಲ ಕಡೆ ಅದು ನ್ಯಾಯಕ್ಕೆ ಅಪಾಯಕಾರಿ’ ಎಂದು ಘೋಷಿಸಿದ್ದ ಹಾಗೂ ಜನಾಂಗೀಯ ತಾರತಮ್ಯದ ವಿರುದ್ಧ ಎಲ್ಲಾ ರೀತಿಯಿಂದ ಹೋರಾಟ ನಡೆಸಿ ತನ್ನ ಜೀವವನ್ನೇ ಬಲಿಕೊಟ್ಟಿದ್ದ ಮಾರ್ಟಿನ್ ಲೂಥರ್ ಕಿಂಗ್ ಹುತಾತ್ಮರಾಗಿ 53 ವರ್ಷಗಳಾದ ನಂತರವೂ, ಕರಿಯರ ವಿರುದ್ಧದ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಪದೆ ಪದೆ ಮರುಕಳಿಸುತ್ತಲೇ ಇವೆ.

ಬಿಳಿಯರ ಶ್ರೇಷ್ಠತೆಯ ಬುನಾದಿಯ ಮೇಲೆ ನಿರ್ಮಾಣವಾಗಿದ್ದ ಶ್ವೇತ ಭವನವನ್ನು ಕರಿಯ ವ್ಯಕ್ತಿ ಬರಾಕ್ ಒಬಾಮ ಅವರು 2009ರಲ್ಲಿ ಪ್ರವೇಶಿಸಿದಾಗ ಅಮೆರಿಕದ ಸಮಾಜ ’ಬದಲಾಗಿದೆ’ ಎಂಬ ನಂಬಿಕೆ ಮೂಡಿತ್ತು. ಕರಿಯರ ಹೃದಯಗಳು ಹಿಗ್ಗಿಹೋಗಿದ್ದವು. ಆದರೆ, ಸಾಮಾಜಿಕ ಅಸಮಾನತೆ ಮಾತ್ರ ಯಾವತ್ತೂ ಕಡಿಮೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಬಿಳಿಯರಿಗೆ ಹೋಲಿಸಿದರೆ ಕರಿಯರು ಚಾಲನೆ ಮಾಡುತ್ತಿರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುವ ಪ್ರಮಾಣ ಶೇಕಡಾ ೩೦ರಷ್ಟು ಹೆಚ್ಚು ಹಾಗೂ ಅವರನ್ನು ವೈಯಕ್ತಿಕವಾಗಿ ತಪಾಸಣೆ ನಡೆಸುವ ಪ್ರಮಾಣ ಬಿಳಿಯರಿಗೆ ಹೋಲಿಸಿದರೆ ಮೂರು ಪಟ್ಟು ಅಧಿಕ ಎಂದು ಒಬಾಮ ನೀಡಿರುವ ಹೇಳಿಕೆಯಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲ.

ಅಮೆರಿದಲ್ಲಿ ಕೊರೊನಾ ಸಾಂಕ್ರಾಮಿಕ 1.07 ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ... ಈ ಪೈಕಿ ಕರಿಯರ ಸಾವಿನ ಪ್ರಮಾಣ ಬಿಳಿಯರಿಗಿಂತ ಮೂರು ಪಟ್ಟು ಅಧಿಕ! ಕೆಲಸಕ್ಕೆ ಪರಿಗಣಿಸುವಾಗ ಕರಿಯರಿಗೆ ಕೊನೆಯ ಸ್ಥಾನ, ಗುಂಡು ಹಾರಿಸುವಾಗ ಮೊದಲ ಸ್ಥಾನ ಎಂಬ ಅಮೆರಿಕದ ಧೋರಣೆಯು ಜನಾಂಗೀಯ ತಾರತಮ್ಯಕ್ಕೆ ಜೀವಂತ ಉದಾಹರಣೆಯಾಗಿದೆ! ಅಮೆರಿಕದ ಜನಸಂಖ್ಯೆಯ ಪೈಕಿ ಕರಿಯರ ಪ್ರಮಾಣ ಶೇಕಡಾ 13.4ರಷ್ಟಿದ್ದು, ಕೊರೊನಾ ಸಾಂಕ್ರಾಮಿಕದ ಪಿಡುಗು, ಅದು ತಂದಿರುವ ಆರ್ಥಿಕ ಕುಸಿತ ಹಾಗೂ ಉದ್ಯೋಗ ನಷ್ಟವನ್ನು ಈ 400 ಲಕ್ಷ ಜನ ತುಟಿ ಪಿಟಕ್ಕೆನ್ನದೇ ಸಹಿಸಿಕೊಂಡು ಬದುಕುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದ: ’ದಂಗೆ ಎಂಬುದು ಧ್ವನಿ ಇಲ್ಲದವರ ಭಾಷೆ’ ಎಂಬುದು ನಿಜವೆನಿಸುತ್ತದೆ.

ಜಗತ್ತಿನ ಈ ಶಕ್ತಿಶಾಲಿ ದೇಶ ಈಗ ಹಿಂಸೆಯಿಂದ ತಳಮಳಿಸುತ್ತಿದ್ದು, ಅಧ್ಯಕ್ಷ ಟ್ರಂಪ್ ಅವರ ಪ್ರಚೋದನಕಾರಿ ಹೇಳಿಕೆಗಳು ಉರಿಯುವ ಬೆಂಕಿಗೆ ಎಣ್ಣೆ ಎರಚುತ್ತಿವೆ. ಜನಾಂಗೀಯ ದ್ವೇಷದ ಅಲೆಯಲ್ಲಿ ಚುನಾವಣೆಯನ್ನು ಗೆದ್ದು ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರಬೇಕೆನ್ನುವ ಟ್ರಂಪ್ ಅವರ ಧೋರಣೆ ನಿಜಕ್ಕೂ ಆಘಾತಕಾರಿ. ಕಳೆದ ಚುನಾವಣೆಯಲ್ಲಿ ಆದಂತೆ, ಕೆಳ ಮತ್ತು ಮಧ್ಯಮ ವರ್ಗದ ಬಿಳಿಯರು ಈ ಸಲವೂ ತನ್ನನ್ನು ಬೆಂಬಲಿಸಿ ಅಧಿಕಾರಕ್ಕೆ ತರಲಿದ್ದಾರೆ ಎಂಬುದು ಅವರ ನಂಬಿಕೆಯಾಗಿದೆ ಅನಿಸುತ್ತದೆ. ಟ್ರಂಪ್ ಪ್ರತಿಸ್ಪರ್ಧಿ ಜೊ ಬಿಡೆನ್ ಅವರು, ತಾವು ಅಧಿಕಾರಕ್ಕೆ ಬಂದರೆ, ಮೊದಲ ನೂರು ದಿನದೊಳಗೆ ಸಂಘಟಿತ ಜನಾಂಗೀಯ ಗಲಭೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡುವುದಾಗಿ ಹೇಳಿದ್ದಾರೆ. ಒಂದು ವೇಳೆ ಜನಾಂಗೀಯ ಸಂಘರ್ಷವು ರಾಜಕೀಯಕ್ಕೆ ಆಹಾರವಾದರೆ, ಜನಾಂಗೀಯ ತಾರತಮ್ಯದಿಂದ ಅಮೆರಿಕ ಚೇತರಿಸಿಕೊಳ್ಳುವುದು ಯಾವಾಗ..?

ABOUT THE AUTHOR

...view details