ಗುಂಟೂರು:ದೇಶದಲ್ಲಿ ಜಾತೀಯತೆ ಎಂಬ ಅಂಟುರೋಗ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಗುಂಟೂರು ಜಿಲ್ಲೆಯಲ್ಲಿ ನಡೆದ ಘಟನೆ ಅದಕ್ಕೆ ಪುಷ್ಠಿ ನೀಡುವಂತಿದೆ.
ಹೌದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತುಳ್ಳೂರು ಹೋಬಳಿಯಲ್ಲಿ ನಡೆದ ಗಣೇಶ ಚತುರ್ಥಿ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೈಎಸ್ಆರ್ಸಿಪಿಯ ತಾಡಿಕೊಂಡ ವಿಧಾನಸಭಾ ಕ್ಷೇತ್ರದ ದಲಿತ ಶಾಸಕಿ ವುಂಡವಲ್ಲಿ ಶ್ರೀದೇವಿ ಅವರನ್ನು ಟಿಡಿಪಿ ಪಕ್ಷದ ಮುಖಂಡರು ಅವಮಾನಿಸಿ ದುಷ್ಟರಂತೆ ವರ್ತಿಸಿದ್ದಾರೆ.
ವಿನಾಯಕನನ್ನು ಕೂರಿಸಿರುವ ಜಾಗಕ್ಕೆ ದಲಿತರು ಕಾಲಿಟ್ಟರೆ, ನಿನ್ನ ನೆರಳು ಸೋಕಿದರೆ ಇಲ್ಲಿ ಮೈಲಿಗೆಯಾಗುತ್ತದೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಈ ಅವಮಾನಕ್ಕೆ ಗುರಿಯಾದ ಶಾಸಕಿ ಶ್ರೀದೇವಿ ಅವರ ಕಣ್ಣಲ್ಲಿ ನೀರು ಜಿನುಗುತ್ತಿತ್ತು.
ಟಿಡಿಪಿ ಕಾರ್ಯಕರ್ತರು, ಮುಖಂಡರು ದಲಿತ ಎಂದು ಜಾತಿಯನ್ನು ಕೆದಕಿ ದೂಷಿಸಿದ್ದಾರೆ. ಈ ಮೂಲಕ ದಲಿತ ಸಮುದಾಯವನ್ನೇ ಅವಮಾನಿಸಲಾಗಿದೆ. ಶತಮಾನದ ಹಿಂದೆ ಮೇಲ್ವರ್ಗದವರು ದಲಿತರನ್ನು ನೋಡುತ್ತಿದ್ದ ದೃಷ್ಟಿಕೋನವೇ 21ನೇ ಶತಮಾನದಲ್ಲೂ ಟಿಡಿಪಿ ಪಕ್ಷದವರು ಮುಂದುವರಿಸುತ್ತಿದ್ದಾರೆ ಎಂದುವೈಎಸ್ಆರ್ಸಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದರಿಂದ ಟಿಡಿಪಿ ಮತ್ತು ವೈಸಿಪಿ (ವೈಎಸ್ಆರ್ಸಿಪಿ) ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ಜರುಗಿದೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಟಿಡಿಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೆಲ್ಲವೂ ಟಿಡಿಪಿ ನಾಯಕರ ಬುದ್ದಿ ಎಂದೂ ದೂರಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕಿ ಶ್ರೀದೇವಿ ಅವರು, ಗಣೇಶನ ಆಶೀರ್ವಾದ ಪಡೆಯಲು ಹೋಗಿದ್ದೆ. ಮಹಿಳೆ ಎಂದೂ ನೋಡದೆ ಟಿಡಿಪಿ ಮುಖಂಡರು ದೂಷಿಸಿದರು. ಶಾಸಕರನ್ನೇ ಈ ರೀತಿ ನೋಡುವಾಗ ಸಾಮಾನ್ಯರನ್ನು ಇನ್ನು ಹೇಗೆ ನೋಡಬಹುದು? ಇದು ಭಯದ ವಾತಾವರಣವನ್ನು ಸೂಚಿಸುತ್ತದೆ. ಇದರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.