ಹೈದರಾಬಾದ್ : ಕೇಂದ್ರ ಸರ್ಕಾರ ಮೋಟಾರು ವಾಹನಗಳಿಗೆ ಸಂಬಂಧಿಸಿದ ಸಿಂಧುತ್ವ ದಾಖಲೆ ಅವಧಿ ಜುಲೈ 31ರವರೆಗೆ ವಿಸ್ತರಿಸಿದೆ. ಈ ನಿರ್ಧಾರವನ್ನು ಸರ್ಕಾರ ತುಂಬಾ ತಡವಾಗಿ ಜಾರಿಗೆ ತಂದಿದೆ ಎಂದು ಅಖಿಲ ಭಾರತ ಮೋಟಾರ್ ಸಂಚಾರ ಕಾಂಗ್ರೆಸ್ (ಎಐಎಂಟಿಸಿ) ಬೇಸರ ವ್ಯಕ್ತಪಡಿಸಿದೆ.
3,500ಕ್ಕೂ ಹೆಚ್ಚು ಟ್ರಕ್, ಬಸ್ ಮತ್ತು ಇತರ ಸಣ್ಣ ವಾಹನಗಳನ್ನು ಹೊಂದಿರುವ ಸಂಘಟನೆ, ಜುಲೈ 31ರವರೆಗೆ ವಾಹನ ದಾಖಲೆಗಳ ಮಾನ್ಯತೆಯನ್ನು ವಿಸ್ತರಿಸುವುದು ಕೇಂದ್ರದ ಕ್ರಮ ತೀರಾ ವಿಳಂಬ ನೀತಿಯಾಗಿದೆ ಎಂದು ಟೀಕಿಸಿದೆ.
ವಿವಿಧ ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ಜುಲೈ 31ರವರೆಗೆ ವಿಸ್ತರಿಸಿದ್ದಾಗಿ ಕೇಂದ್ರ ಸರ್ಕಾರ ಭಾನುವಾರ ತಿಳಿಸಿತ್ತು. ಫೆಬ್ರವರಿ 1 ರಿಂದ ಬಾಕಿ ಇರುವ ದಾಖಲೆಗಳ ಮೌಲ್ಯಮಾಪನ ವಿಳಂಬಕ್ಕೆ ಯಾವುದೇ ಹೆಚ್ಚುವರಿ ಅಥವಾ ಅಧಿಕ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಿತ್ತು.
ಕೇಂದ್ರ ಸರ್ಕಾರದ ಪರಿಹಾರದ ಕ್ರಮ ತಡವಾಗಿ ಜಾರಿ ಆಗಿದೆ. ಲಾಕ್ಡೌನ್ ವಿಸ್ತರಣೆ ಆದಾಗಿನಿಂದ ಸುಮಾರು ಶೇ 65-70 ವಾಹನಗಳು ರಸ್ತೆಗೆ ಇಳಿದಿಲ್ಲ. ಮೋಟಾರು ವಿಮೆ ವಿಸ್ತರಣೆ, ಇಎಂಐ ಮೇಲಿನ ಬಡ್ಡಿ, ರಾಜ್ಯ ಪರವಾನಗಿ ಶುಲ್ಕ, ಸರಕು ತೆರಿಗೆ, ಪ್ರಯಾಣಿಕರ ತೆರಿಗೆ, ಮೋಟಾರು ವಾಹನಗಳ ತೆರಿಗೆ ಇತ್ಯಾದಿಗಳ ಬಗ್ಗೆ ಸರ್ಕಾರ ಗಮನ ವಹಿಸಬೇಕು ಎಂದು ಎಐಎಂಟಿಸಿ ಅಧ್ಯಕ್ಷ ಕುಲ್ತರಣ್ ಸಿಂಗ್ ಅಟ್ವಾಲ್ ಇಟಿವಿ ಭಾರತಗೆ ತಿಳಿಸಿದರು.
ಕೊವಿಡ್-19 ಆತ್ಮನಿರ್ಭಾರ ಭಾರತ ಪ್ಯಾಕೇಜ್ನಲ್ಲಿ ಘೋಷಿಸಿದ ಎಲ್ಲಾ ಭರವಸೆಗಳು ಹುಸಿಯಾಗಿವೆ. ಸರ್ಕಾರ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಸರಕು ಹಾಗೂ ಇತರೆ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಹೊಸ ಪ್ಯಾಕೇಜ್ ಘೋಷಿಸಬೇಕೆಂದು ಎಂದು ಮನವಿಮಾಡಿಕೊಂಡರು.