ಮುಂಬೈ: ಸಿಬಿಐ ಮತ್ತು ಎಸ್‌ಐಟಿ ಗುರುವಾರದಂದು ಮುಂಬೈಗೆ ಆಗಮಿಸಿದ್ದು, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ. ನಟನ ಸಾವಿನ ಬಗ್ಗೆ ತನಿಖೆ ನಡೆಸಲು ಸಿಬಿಐ, ಎಸ್‌ಐಟಿ ತಂಡ ರಚಿಸಿದ್ದು, ರಜಪೂತ್ ಅವರ ಬಾಂದ್ರಾ ನಿವಾಸದಿಂದ ತನಿಖೆ ಶುರು ಮಾಡಿದೆ.
"ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಮುಂಬೈನ ಸುಶಾಂತ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಈ ಬಳಿಕ ನಟನ ಮೃತದೇಹ ದೊರೆತ ಸ್ಥಳದಲ್ಲಿ ತನಿಖೆ ಪ್ರಾರಂಭಿಸಲಿದ್ದಾರೆ" ಎಂದು ಸಿಬಿಐ ಮೂಲಗಳು ತಿಳಿಸಿವೆ. ಇನ್ನು ಇದಕ್ಕೂ ಮುಂಚಿತವಾಗಿ ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
"ಮುಂಬೈ ಪೊಲೀಸ್ ಅಧಿಕಾರಿಗಳು, ಇತರ ಸಿಬ್ಬಂದಿ ಮತ್ತು ದಿವಂಗತ ನಟನ ಸ್ನೇಹಿತರನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಈಗಾಗಲೇ ಮುಂಬೈ ಪೊಲೀಸರು ವಿಚಾರಣೆ ನಡೆಸಿದವರನ್ನೂ ಸಹ ಸಿಬಿಐ ತನಿಖೆಗೆ ಒಳಪಡಿಸಲಿದೆ " ಎಂದು ಮೂಲಗಳು ತಿಳಿಸಿವೆ.