ಚೆನ್ನೈ:ಭಾರತ ಚಿತ್ರರಂಗ ಕಂಡ ಅದ್ಭುತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಬದುಕಿರುವವರೆಗೂ ವಿನಯ, ವಿಧೇಯತೆಯಿಂದಲೇ ಬದುಕಿದವರು. ಸರಳವಾಗಿದ್ದ ಅವರು ಇದೇ ಕಾರಣಕ್ಕಾಗಿಯೇ ಎಲ್ಲರಿಗೂ ಇಷ್ಟವಾಗ್ತಿದ್ದರು. ಆದರೆ, ಕೊನೆಯ ದಿನಗಳಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲೂ ಈ ಗುಣವನ್ನ, ಮುಗ್ಧತೆಯನ್ನ ಕಳೆದುಕೊಂಡಿರಲಿಲ್ಲ. ಚಿಕಿತ್ಸೆ ನೀಡಿದ್ದ ವೈದ್ಯರಲ್ಲೊಬ್ಬರಾದ ಡಾ.ಸುರೇಶ್ ರಾವ್ ತುಂಬಾ ಭಾವನಾತ್ಮಕವಾಗಿಯೇ ಎಸ್‌ಪಿಬಿ ಕಡೆಯ ಆ ದಿನಗಳ ಬಗ್ಗೆ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಮನದಾಳದ ಭಾವ ಹಂಚಿಕೊಂಡ ಎಸ್ಪಿಬಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಚಿಕಿತ್ಸೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರಂತೆ. ಕೊರೊನಾದಿಂದ ತಮ್ಮನ್ನು ಕಾಪಾಡಿಕೊಳ್ಳಲು ಒಬ್ಬ ಫೈಟರ್ ರೀತಿ ಅವರು ಪ್ರತಿದಿನವೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಂತೆ. ಕೊರೊನಾದಿಂದ ಗಂಟಲಿನಲ್ಲಿ ಸಮಸ್ಯೆ ಕಾಣಿಸಿದ್ದರಿಂದ, ವೈದ್ಯರು ವೆಂಟಿಲೇಟರ್ ಸಹಾಯದಿಂದ ಎಸ್‌ಪಿಬಿ ಜೊತೆ ಮಾತನಾಡುತ್ತಿದ್ದರು. ಅವರಿಗೆ ಪೆನ್ನು ಮತ್ತು ಪುಸ್ತಕ ಸಹ ಕೊಡಲಾಗಿತ್ತು. ಅದರಲ್ಲಿ ಬರೆದು ತಮಗೆ ಏನಾದ್ರೂ ಬೇಕಿದ್ದರೆ ಅವರು ತಿಳಿಸುತ್ತಿದ್ದರು.
ಎಸ್‌ಪಿಬಿ ಅವರಿಗೆ ಐಪಿಎಲ್ ಮ್ಯಾಚ್ ಅಂದ್ರೆ ತುಂಬಾ ಇಷ್ಟವಂತೆ. ಅವರು ಈ ಬಾರಿ ಐಪಿಎಲ್ ನೋಡಬೇಕು ಎಂದು ಸಹ ಹೇಳಿದ್ದರಂತೆ. ಅವರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿರಲಿಲ್ಲ. ಆ ಭಾವ ಜೀವಿ ಒಂದು ಬಾರಿಯೂ ಸಹ ಆಸ್ಪತ್ರೆಯ ಸಿಬ್ಬಂದಿ ಮೇಲೆ ಕೋಪಗೊಂಡಿರಲಿಲ್ಲ ಎಂದು ಭಾವುಕರಾಗ್ತಾರೆ ವೈದ್ಯರು.
ಈ ಮೊದಲು ತಮ್ಮಲ್ಲಿ ಚೇತರಿಕೆ ಕಾಣಿಸಿಕೊಂಡಾಗ ನಗು ನಗುತ್ತಾ, ಹೆಬ್ಬರಳಿನಿಂದ ಸನ್ನೆ ಮಾಡಿ ವೈದ್ಯರಿಗೆ ಅವರೇ ಹುರಿದುಂಬಿಸುತ್ತಿದ್ದರಂತೆ. ಅವರು ಬದುಕುಳಿಯಲಿ ಹಾಗೂ ಮತ್ತೆ ಹಾಡಲಿ ಎಂದು ಕಳೆದ ಒಂದು ತಿಂಗಳಿನಿಂದ ಕೋಟ್ಯಂತರ ಸಂಗೀತ ಪ್ರೇಮಿಗಳು, ನಿರಂತರ ಪ್ರಾರ್ಥನೆ ಮಾಡುತ್ತಿದ್ದರು. ಆ ಜೀವ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಮ್ಮನ್ನು ಅಗಲಿ ಬಿಟ್ಟಿತು.
ಕಳೆದ 50 ವರ್ಷಗಳಿಂದ ಹಾಡುವ ಮೂಲಕ ಕೋಟ್ಯಂತರ ಜನರ ಮನದಲ್ಲಿ ಜಾಗ ಪಡೆದ ಗಾನ ದಿಗ್ಗಜ ಇಂದು ನಮ್ಮ ಜೊತೆ ಇಲ್ಲ. ಆದರೆ, ಅವರಿಗೆ ಸಾವಿಲ್ಲ. ಯಾಕಂದ್ರೆ, ಅವರ ಧ್ವನಿ ನಮ್ಮೆಲ್ಲರ ಹೃದಯದಲ್ಲಿ ಯಾವಾಗಲೂ ರಿಂಗಣಿಸುತ್ತಲೇ ಇರಲಿದೆ..