ನವದೆಹಲಿ: ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ವತಿಯಿಂದ ನಡೆಸಿದ ಅಧ್ಯಯನವೊಂದರಲ್ಲಿ ಭಾರತದಲ್ಲಿ ಇಬ್ಬರು ಹೆಣ್ಣುಮಕ್ಕಳ ನಂತರ ಜನಿಸಿದ ಗಂಡು ಮಗು, ಇಬ್ಬರು ಹೆಣ್ಣುಮಕ್ಕಳ ನಂತರ ಜನಿಸಿದ ಹೆಣ್ಣು ಮಗುವಿಗಿಂತ ಬದುಕುಳಿಯುವ ಸಾಧ್ಯತೆ ಹೆಚ್ಚು ಎಂಬ ವಿಷಯ ತಿಳಿದುಬಂದಿದೆ.
ಪುರುಷರಲ್ಲಿ ಶೇಕಡಾವಾರು ಶಿಶು ಮರಣ ಶೇ 4ರಷ್ಟು ಇದ್ದು, ಇದು ಮಹಿಳೆಯರಲ್ಲಿ ಶಿಶು ಮರಣದ ಶೇಕಡಾವಾರು ಪ್ರಮಾಣಕ್ಕಿಂತ (ಶೇ.3.35) ಹೆಚ್ಚಾಗಿದೆ. ಆದರೆ ಇಬ್ಬರು ಹಿರಿಯ ಸಹೋದರಿಯರ ಬಳಿಕ ಮೂರನೇ ಜನಿಸಿದ ಮಕ್ಕಳಲ್ಲಿ, ಗಂಡು ಮಕ್ಕಳಿಗಿಂತ (ಶೇ2.24) ಹೆಣ್ಣು ಮಕ್ಕಳೇ ಶೈಶವಾವಸ್ಥೆಯಲ್ಲಿ ಸಾಯುವ ಸಾಧ್ಯತೆ ಹೆಚ್ಚು (ಶೇ.3.69) ಇದ್ದು, ಈ ಗುಂಪಿನಲ್ಲಿರುವ ಹುಡುಗರಿಗೆ ಹೋಲಿಸಿದರೆ ಹುಡುಗಿಯರಿಗೆ ಹೆಚ್ಚಿನ ಪ್ರಮಾಣ ಶೇ.ಶೇ 64ರಷ್ಟಿದೆ.
ಇನ್ನೊಂದು ಆಶ್ಚರ್ಯಕರ ಸಂಗತಿಯೇನೆಂದರೆ ಇಬ್ಬರು ಅಕ್ಕಂದಿರ ಬಳಿಕ ಜನಿಸಿದ ಹೆಣ್ಣು ಮಗುವಿಗೆ ಹೋಲಿಸಿದರೆ, ಅಕ್ಕಂದಿರ ಬಳಿಕ ಜನಿಸಿದ ಗಂಡು ಮಗು ಬದುಕುಳಿಯುವ ಸಾಧ್ಯತೆ ಹೆಚ್ಚಿದೆ. ಹೆಣ್ಣು ಮಗುವಿಗಿಂತ ಎರಡು ಪಟ್ಟು ಗಂಡು ಮಗುವಿಗೆ ಹೆಚ್ಚು ಎಂಬುದನ್ನು ಅಧ್ಯಯನದ ವರದಿ ಹೇಳುತ್ತದೆ.
ಬದುಕುಳಿಯುವ ಸಾಧ್ಯತೆ ಹೇಗೆ ಹೆಚ್ಚು?
ಅಧ್ಯಯನದ ವರದಿ ಪ್ರಕಾರ ಅಕ್ಕಂದಿರ ಬಳಿಕ ಜನಿಸಿದ ಗಂಡು ಮಗುವಿನ ಮೇಲೆ ಪೋಷಕರು ಹೆಚ್ಚು ಕಾಳಜಿ ವಹಿಸಲಿದ್ದು, ಆ ಮಗುವಿನ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ. ಅಲ್ಲದೇ ಹೆಣ್ಣು ಮಕ್ಕಳಿಗೆ ಹೋಲಿಸಿದರೆ ಭಾರತದಲ್ಲಿ ತಾಯಂದಿರು ಗಂಡು ಮಕ್ಕಳಿಗೇ ಹೆಚ್ಚಿನ ಪ್ರಮಾಣದಲ್ಲಿ ಎದೆಹಾಲು ಕುಡಿಸುತ್ತಾರೆ. ಹೀಗಾಗಿ ಕಾಳಜಿ ಹಾಗೂ ಉತ್ತಮ ಆರೋಗ್ಯದ ಕಾರಣದಿಂದಾಗಿ ಈ ಗಂಡು ಮಗು ಬದುಕುಳಿಯುವ ಸಾಧ್ಯತೆ ಹೆಚ್ಚಂತೆ.
ಹಿರಿಯ ಸಹೋದರ ಅಥವಾ ಸಹೋದರಿಯನ್ನು ಹೊಂದಿರುವ ಶಿಶುಗಳಿಗೆ ಹೋಲಿಸಿದರೆ, ಹಿರಿಯ ಸಹೋದರರಿಲ್ಲದಿರುವುದು ಹುಡುಗರು ಮತ್ತು ಹುಡುಗಿಯರಲ್ಲಿ ಶಿಶು ಮರಣದ ಅಪಾಯ ಹೆಚ್ಚಿದೆ ಎಂಬ ವಿಷಯವೂ ಕೂಡ ಈ ಅಧ್ಯಯನದಲ್ಲಿ ಬೆಳಕಿಗೆ ಬಂದಿರುವ ಮೊತ್ತೊಂದು ಗಮನಾರ್ಹ ವಿಚಾರವಾಗಿದೆ.
ಇನ್ನು ಭಾರತದ ಶ್ರೀಮಂತ ಕುಟುಂಬಗಳಲ್ಲಿ ಜನಿಸಿದ ಈ ರೀತಿಯ ಪ್ರಕರಣದ ಮಕ್ಕಳಲ್ಲಿ ಹೆಣ್ಣು ಮಗುವಿಗಿಂತ ಗಂಡು ಮಗುವಿಗೇ ಹೆಚ್ಚಿನ ಆದ್ಯತೆಯನ್ನೂ ಕೂಡ ನೀಡಲಾಗುತ್ತದೆ. ಕುಟುಂಬದವರು ಈ ಗಂಡು ಮಗುವಿನ ಆರೈಕೆಗೇ ಹೆಚ್ಚು ಹಣ ಖರ್ಚು ಮಾಡುವುದರಿಂದ ಇದು ಲಿಂಗ ಅನುಪಾತದಲ್ಲಿ ಅಸಮತೋಲನಕ್ಕೆ ಹಾಗೂ ಬಡ ಕುಟುಂಬಗಳಲ್ಲಿ ಹೆಣ್ಣು ಶಿಶು ಮರಣಕ್ಕೆ ಕಾರಣವಾಗುತ್ತದೆ.