ನವದೆಹಲಿ:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯಲ್ಲಿ ವರ್ಚ್ಯುವಲ್ ಸಮಾವೇಶದ ಮೂಲಕ 47 ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ವಿಜೇತ 47 ಶಿಕ್ಷಕರಲ್ಲಿ 18 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ ಕರ್ನಾಟಕದ ಇಬ್ಬರು ಶಿಕ್ಷಕರಿದ್ದಾರೆ. ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್, ಕಲಬುರಗಿಯ ಅಪ್ಜಲ್ಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್ ಎಂಬ ಶಿಕ್ಷಕರು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಅನನ್ಯ ಕೊಡುಗೆಯನ್ನು ಗುರುತಿಸಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ, ಅವರು ವಿದ್ಯಾರ್ಥಿಗಳ ಜೀವನದಲ್ಲಿ ಭಾರಿ ಬದಲಾವಣೆ ತಂದಿದ್ದಾರೆ.
ನಾನು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸುತ್ತೇನೆ. ಮಕ್ಕಳ ಶಿಕ್ಷಣದಲ್ಲಿ ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯನ್ನು ಪ್ರಶಂಸಿಸುತ್ತೇನೆ. ನಮ್ಮ ದೇಶದ ಶಿಕ್ಷಕ ಸಮುದಾಯದ ಎಲ್ಲ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಶಿಕ್ಷಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವಾಲಯ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಒಟ್ಟು 47 ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ. 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ 7 ಸಾಂಸ್ಥಿಕ ಆಯ್ಕೆ ಸಮಿತಿ ಒಟ್ಟೂ 153 ಶಿಕ್ಷಕರ ಅರ್ಜಿ ಪರಿಶೀಲಿಸಿ ಈ ಪ್ರಶಸ್ತಿ ಪಟ್ಟಿ ತಯಾರಿಸಿದೆ.
2018ರಲ್ಲಿ ಶಿಕ್ಷಕರ ರಾಷ್ಟ್ರೀಯ ಪ್ರಶಸ್ತಿ ಆಯ್ಕೆಯ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಯಿತು ಮತ್ತು ಆ ಪ್ರಕ್ರಿಯೆಯನ್ನು ಆನ್ ಲೈನ್ ಮತ್ತು ಪಾರದರ್ಶಕಗೊಳಿಸಲಾಯಿತು ಹಾಗೂ ರಾಷ್ಟ್ರಮಟ್ಟದ ಆಯ್ಕೆ ಸಮಿತಿ ಸೇರಿ ಮೂರು ಹಂತಗಳನ್ನು ರಚಿಸಲಾಯಿತು.