ನವದೆಹಲಿ :ಭಾರತ ಸೇರಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗಾಗಿ ಮುಂದಿನ ವರ್ಷ ಹೆಚ್ಚುವರಿ 100 ಮಿಲಿಯನ್ ಕೋವಿಡ್ -19 ಲಸಿಕೆ ಉತ್ಪಾದಿಸುವುದಾಗಿ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮಂಗಳವಾರ ಪ್ರಕಟಿಸಿದೆ.
100 ಮಿಲಿಯನ್ ಕೋವಿಡ್ ಲಸಿಕೆ ತಯಾರಿಸುವುದಾಗಿ ವಿಶ್ವದ ಅತೀ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಕಳೆದ ಆಗಸ್ಟ್ನಲ್ಲಿ ಘೋಷಿಸಿತ್ತು. ಈಗ ಗವಿ-ದಿ ವ್ಯಾಕ್ಸಿನ್, ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಸಹಯೋಗದೊಂದಿಗೆ, ಹೆಚ್ಚುವರಿ 100 ಮಿಲಿಯನ್ ಉತ್ಪಾದಿಸುವುದಾಗಿ ಘೋಷಿಸಿದೆ. ಹೀಗಾಗಿ, ಇತರ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಸೇರಂ ಸಂಸ್ಥೆ 200 ಮಿಲಿಯನ್ ಕೋವಿಡ್ ಲಸಿಕೆ ಉತ್ಪಾದಿಸಿ ವಿತರಿಸಲಿದೆ.
2021ರಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ 3 ಯುಎಸ್ ಡಾಲರ್ಗೆ ಲಸಿಕೆ ಪೂರೈಸುವುದಾಗಿ ಎಸ್‌ಐಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್, ಗವಿಗೆ ಇನ್ನೂ 150 ಮಿಲಿಯನ್ ಡಾಲರ್ ಧನ ಸಹಾಯ ಒದಗಿಸಲಿದೆ. ಈ ಮೂಲಕ ಗವಿ ಸಂಸ್ಥೆ 300 ಮಿಲಿಯನ್ ಯುಎಎಸ್ ಡಾಲರ್ ಸಂಗ್ರಹಿಸಲಿದೆ. ಗವಿ ಈ ಹಣವನ್ನು ಸೇರಂ ಸಂಸ್ಥೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಮುಂಗಡ ಹೂಡಿಕೆ ಮಾಡಲಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಲಸಿಕೆ ಅನುಮೋದನೆ ದೊರೆತರೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶ (ಎಲ್ಎಂಸಿ)ಗಳಿಗೆ ಅನುಗುಣವಾಗಿ ಗವಿ, ಕೋವ್ಯಾಕ್ಸ್ ಮತ್ತು ಎಎಂಸಿ ಜಂಟಿಯಾಗಿ ಲಸಿಕೆ ಉತ್ಪಾದಿಸಲಿದೆ ಎಂದು ಸೇರಂ ಅಧಿಕಾರಿ ಮಾಹಿತಿ ನೀಡಿದರು. ಗವಿ ಮತ್ತು ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಸಹಯೋಗದಲ್ಲಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗಾಗಿ ಹೆಚ್ಚುವರಿ 100 ಮಿಲಿಯನ್ ಡೋಸ್ ಇಮ್ಯುನೊಜೆನಿಕ್ ಮತ್ತು ಇತರ ಸುರಕ್ಷತೆ ಸಾಬೀತಾದ ಕೋವಿಡ್-19 ಲಸಿಕೆ ತಯಾರಿಸುತ್ತೇವೆ ಮತ್ತು ವಿತರಿಸುತ್ತೇವೆ ಎಂದು ಎಸ್‌ಐಐ ಸಿಇಒ ಆದರ್ ಪೂನವಾಲ್ಲಾ ಹೇಳಿದ್ದಾರೆ.