ಕರ್ನಾಟಕ

karnataka

ETV Bharat / bharat

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗಾಗಿ ಇನ್ನೂ ಇಡಬೇಕಾದ ಹೆಜ್ಜೆಗಳು ಸಾಕಷ್ಟಿವೆ... - Rafal Airport

ದೇಶದ ಉಳಿವಿಗಾಗಿ ವಾಯುಪಡೆ, ನೌಕಾಪಡೆ, ಬಾಹ್ಯಾಕಾಶ ಹಾಗೂ ಸೈಬರ್ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವುದು ಮಹತ್ವದ ಸಂಗತಿ ಎನಿಸಿಕೊಂಡಿದೆ. ರಕ್ಷಣೆಯಂತಹ ಪ್ರಮುಖ ವಲಯದಲ್ಲಿ ಆಮದು ಮುಂದುವರಿದು, ಇತರೆ ದೇಶಗಳ ಮೇಲೆಯೇ ಭಾರತ ಅವಲಂಭಿತವಾಗಿದೆ.

Self-reliance , a must for country in a defense sector
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗಾಗಿ ಇನ್ನೂ ಇಡಬೇಕಾದ ಹೆಜ್ಜೆಗಳು ಸಾಕಷ್ಟಿವೆ...

By

Published : Aug 11, 2020, 5:37 PM IST

ನವದೆಹಲಿ: ದೇಶದ ಮೊದಲ ಪ್ರಧಾನ ಮಂತ್ರಿ, ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಒಮ್ಮೆ, ‘ನಮ್ಮ ಸೈನ್ಯದ ಅವಶ್ಯಕತೆಗಳಿಗಾಗಿ ನಾವು ಇತರ ದೇಶಗಳ ಮೇಲೆ ಅವಲಂಬಿತರಾಗುವುದು ತಾತ್ಕಾಲಿಕವಾಗಿಯಷ್ಟೇ ಇರಬೇಕು ಮತ್ತು ದೀರ್ಘಾವಧಿಯಲ್ಲಿ ಅಗತ್ಯ ರಕ್ಷಣಾ ಸಾಧನಗಳನ್ನು ನಾವೇ ತಯಾರಿಸಿಕೊಳ್ಳುವಷ್ಟು ಸ್ವಾವಲಂಬಿಗಳಾಗಬೇಕು ಎಂದು ಸೂಚಿಸಿದ್ದರು.

ನೆಹರೂ ಅವರ 'ತಾತ್ಕಾಲಿಕ' ಮತ್ತು 'ಸ್ವಾವಲಂಬಿ' ಪದಗಳ ಜಾಣ್ಮೆಯನ್ನು ನಮ್ಮ ಆಡಳಿತಗಾರರು ಅರ್ಥ ಮಾಡಿಕೊಳ್ಳಲಿಲ್ಲ. ರಾಜಕೀಯ ನಾಯಕರ ಮಂದದೃಷ್ಟಿಯ ಪರಿಣಾಮ ರಕ್ಷಣೆಯಂತಹ ಪ್ರಮುಖ ವಲಯದಲ್ಲಿ ಆಮದು ಮುಂದುವರಿದು ಭದ್ರತೆಗೆ ಅಪಾಯ ಉಂಟಾಗುವ ಸ್ಥಿತಿ ಒದಗಿ ಬಂದರೂ ಭಾರತ ಪರಾವಲಂಬಿಯಾಗಿಯೇ ಉಳಿಯುವಂತಾಯಿತು.

ಕಳೆದ ಎರಡು ದಶಕಗಳಲ್ಲಿ, ಎಂಟು ಸಮಿತಿಗಳು ಮತ್ತು ಕಾರ್ಯಪಡೆಗಳು ಸ್ಥಳೀಯವಾಗಿ ರಕ್ಷಣಾ ಸಾಧನಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಂತೆ ಸಲಹೆ ನೀಡಿ ಹಲವಾರು ವರದಿಗಳು ಮತ್ತು ಶಿಫಾರಸುಗಳನ್ನು ಸಲ್ಲಿಸಿವೆ. ಆದರೆ ಪರಿಣಾಮಕಾರಿ ಎನಿಸುವಂತಹ ಯೋಜನೆ ಜಾರಿಯ ಕೊರತೆಯಿಂದಾಗಿ ಈ ವಿಷಯ' ಅದು ಎಲ್ಲಿ ಇತ್ತೋ ಅಲ್ಲಿಯೇ ಇದೆ ' ..

ಕೇಂದ್ರ ಹಣಕಾಸು ಸಚಿವರು ಆತ್ಮನಿರ್ಭರ್ ಭಾರತ್ ( ಸ್ವಾವಲಂಬಿ ಭಾರತ ) ಹೆಸರಿನಲ್ಲಿ ಕಾರ್ಯಸೂಚಿ ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತ ರಕ್ಷಣಾ ವಲಯ ಸ್ವಾವಲಂಬನೆ ಹಾದಿ ಹಿಡಿಯುವುದು ಹೇಗೆ ಎಂಬ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ರಕ್ಷಣಾ ಉತ್ಪನ್ನಗಳ ರಫ್ತು ಅಭಿವೃದ್ಧಿ ನೀತಿಯ ಪ್ರಕಾರ 2025ರ ವೇಳೆಗೆ 75 ಲಕ್ಷ ಕೋಟಿ ರೂಪಾಯಿಯಷ್ಟು ದೇಶೀಯ ವಹಿವಾಟು ಮತ್ತು 35 ಲಕ್ಷ ಕೋಟಿ ರೂಪಾಯಿಗಳಷ್ಟು ರಫ್ತು ವಹಿವಾಟು ನಡೆಸುವ ಗುರಿ ಇರಿಸಿಕೊಳ್ಳಲಾಗಿದೆ.

ದೇಶೀಯ ರಕ್ಷಣಾ ಉತ್ಪನ್ನಗಳ ಪ್ರಸ್ತುತ ವಹಿವಾಟು 80,000 ಕೋಟಿ ರೂ. ಆಗಿದ್ದು ಇದರಲ್ಲಿ ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಸರ್ಕಾರಿ ಶಸ್ತ್ರಾಸ್ತ್ರ ಕಾರ್ಖಾನೆಗಳ ಪಾಲು ರೂ. 63,000 ಕೋಟಿ ಇದೆ.

ರಕ್ಷಣಾ ಉತ್ಪನ್ನಗಳ ತಯಾರಿಕೆ ಉತ್ತೇಜಿಸಲು 2001 ರಿಂದ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡಲಾಗುತ್ತಿದೆ ಎಂದು ನಾವು ಹೇಳುತ್ತಿದ್ದೇವೆ. ಅವುಗಳ ವಹಿವಾಟು 17,000 ಕೋಟಿ ರೂ.ಗಳಿಗೆ ಮಾತ್ರ ಸೀಮಿತವಾಗಿದೆ. ಈ ವರ್ಷ 52,000 ಕೋಟಿ ರೂಪಾಯಿಗಳನ್ನು ದೇಶೀಯ ಖರೀದಿಗೆ ಮೀಸಲಿಡಲಾಗುವುದು ಎಂದು ರಕ್ಷಣಾ ಸಚಿವರು ಘೋಷಿಸಿರುವುದು ದೇಶೀಯ ರಕ್ಷಣಾ ಉದ್ಯಮಕ್ಕೆ ಹೊಸ ಉಸಿರು ನೀಡಿದಂತೆ ಆಗಿದೆ.

ಅಲ್ಲದೆ 101 ರಕ್ಷಣಾ ಉತ್ಪನ್ನಗಳ ಆಮದನ್ನು ನಿಷೇಧಿಸಲಾಗಿದೆ ಹಾಗೂ ದೇಶೀಯ ಕೈಗಾರಿಕೆಗಳಿಗೆ ಮುಂದಿನ 6 ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ವಿನಿಯೋಗಿಸಲಾಗಿದೆ.

ಆತ್ಮನಿರ್ಭರ್ ಗುರಿ ಸಾಧನೆಗೆ ಈಗ ಇಂತಹ ಪ್ರೋತ್ಸಾಹ ಅಗತ್ಯ !

ವಿಶ್ವದ 2ನೇ ಅತಿದೊಡ್ಡ ಸಶಸ್ತ್ರ ಪಡೆಗಳನ್ನು ಹೊಂದಿರುವ ಭಾರತ, ಶಸ್ತ್ರಾಸ್ತ್ರ ಮತ್ತು ಸೇನಾ ಉಪಕರಣಗಳನ್ನು ಆಮದು ಮಾಡಿಕೊಳ್ಳುವ 2ನೇ ಅತಿ ದೊಡ್ಡ ರಾಷ್ಟ್ರ ಕೂಡ ಆಗಿದೆ. ರಕ್ಷಣಾ ಬಿಡಿಭಾಗಗಳಿಗಾಗಿ ರಷ್ಯಾವನ್ನು ದಶಕಗಳ ಕಾಲ ಅವಲಂಬಿಸಿರುವುದು ಭಾರತವನ್ನು ವಿವಿಧ ಕಾಲಘಟ್ಟಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಹೊಸ ಸಹಸ್ರಮಾನದಲ್ಲಿ ಸಮರದ ವೇಳೆ ಕಾಲಾಳು ಪಡೆಗಳ ಪ್ರಾಮುಖ್ಯತೆ ಕಡಿಮೆ ಆಗುತ್ತಿದೆ.

ಬದಲಿಗೆ ದೇಶದ ಉಳಿವಿಗಾಗಿ ವಾಯುಪಡೆ, ನೌಕಾಪಡೆ, ಬಾಹ್ಯಾಕಾಶ ಹಾಗೂ ಸೈಬರ್ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವುದು ಮಹತ್ವದ ಸಂಗತಿ ಎನಿಸಿಕೊಂಡಿದೆ. ಖಾಸಗಿ ವಲಯವನ್ನು ಕಡೆಗಣಿಸುವುದರ ಜೊತೆಗೆ ಎಂದಿನಂತೆ ಕೇವಲ ಸಾರ್ವಜನಿಕ ವಲಯದ 9 ಕಂಪನಿಗಳು ಹಾಗೂ 41 ಆರ್ಡಿನೆನ್ಸ್ ಕಾರ್ಖಾನೆಗಳನ್ನು ಮಾತ್ರ ಅವಲಂಬಿಸಿದರೆ ರಕ್ಷಣಾ ಕ್ಷೇತ್ರದ ಸ್ವಾವಲಂಬನೆ ಎಂಬುದು ಮರೀಚಿಕೆಯಾಗಿ ಉಳಿಯುತ್ತದೆ.

ವಿವಿಧ ರಕ್ಷಣಾ ಉತ್ಪನ್ನಗಳ ಖರೀದಿಗೆ ಭಾರತ 1. 3 ಲಕ್ಷ ಕೋಟಿ ರೂ. ಖರ್ಚು ಮಾಡುತ್ತದೆ. ಅದರಲ್ಲಿ 77,000 ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವಲಯಕ್ಕೆ ಮೀಸಲಿಡಲಾಗಿದ್ದರೆ, ಮೂರೂವರೆ ಸಾವಿರದಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಇರುವ ಖಾಸಗಿ ವಲಯಕ್ಕೆ ಕೇವಲ 14,000 ಕೋಟಿ ರೂಪಾಯಿ ವಿನಿಯೋಗ ಮಾಡಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಶೇಕಡಾ 74ಕ್ಕೆ ಹೆಚ್ಚಿಸಿರುವ ಕೇಂದ್ರ ಸರ್ಕಾರ ಖಾಸಗಿ ಕ್ಷೇತ್ರಕ್ಕೆ ಬೆಂಬಲ ನೀಡಿದರೆ ಮಾತ್ರ ಸ್ವಾವಲಂಬನೆ ಗುರಿ ಸಾಧಿಸಬಲ್ಲದು. ಆದರೆ ಅದು ಇನ್ನೂ ಬಾಲಗ್ರಹ ಸಮಸ್ಯೆಯಿಂದ ಹೊರಬಂದಿಲ್ಲ.

ವಿಶ್ವದ ಅಗ್ರ 100 ರಕ್ಷಣಾ ಕೈಗಾರಿಕೆಗಳ ಪಟ್ಟಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 35ನೇ ಸ್ಥಾನದಲ್ಲಿದೆ. ಭಾರತೀಯ ರಕ್ಷಣಾ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಕಾಲಕಾಲಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಪಡೆದುಕೊಳ್ಳುವಂತಹ ಮತ್ತು ಸ್ಥಳೀಯವಾಗಿ ಸಂಶೋಧನೆಯ ಮೂಲಕ ಅವಿಚ್ಛಿನ್ನ ರೀತಿಯ ಶಸ್ತ್ರಾಸ್ತ್ರಗಳನ್ನು ವಿನ್ಯಾಸಗೊಳಿಸುವಂತಹ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮವನ್ನು ಉದಾರೀಕರಣಗೊಳಿಸಿದಾಗ, ವಿದೇಶಿ ನೇರ ಹೂಡಿಕೆಗಳ ಬಗ್ಗೆ ಕಾಳಜಿ ವಹಿಸಿದಾಗ ಹಾಗೂ ದೇಶೀಯ ರಕ್ಷಣಾ ಕೈಗಾರಿಕೆಗಳ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಉತ್ತೇಜನ ನೀಡಿದಾಗ ಮಾತ್ರ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವುದು ಸಾಧ್ಯವಾಗುತ್ತದೆ.

ABOUT THE AUTHOR

...view details