ನವದೆಹಲಿ:ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದ 17 ಶಾಸಕರ ಕುರಿತಾದ ಮಹತ್ವದ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಿದೆ. ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಅನರ್ಹರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಸಮತೋಲನದ ತೀರ್ಪು ಕೊಟ್ಟಿದೆ.
ನ್ಯಾಯಮೂರ್ತಿ ಎನ್. ವಿ. ರಮಣ, ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ಕೃಷ್ಣ ಮುರಾರಿಯವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿತು. ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿಯಿತು. ಅನರ್ಹ ಶಾಸಕರು ಸುಪ್ರೀಂ ಮೆಟ್ಟಿಲೇರಿರುವ ಕುರಿತು ಅಸಮಾಧಾನ ಹೊರಹಾಕಿದ ನ್ಯಾಯಾಲಯ, ನೀವು ಸ್ಪೀಕರ್ ಆದೇಶವನ್ನು ಪ್ರಶ್ನಿಸುವ ಮೊದಲು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬಹುದಿತ್ತು ಎಂದಿತು.
ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿದ ಕೋರ್ಟ್:
ಅರ್ಜಿದಾರರು ರಾಜೀನಾಮೆಗೆ ಬಯಸಿದ್ದಾರೆಂಬುದು ಸ್ಪಷ್ಟವಾದ ಬಳಿಕ ಸ್ಪೀಕರ್ ರಾಜೀನಾಮೆ ಅಂಗೀಕರಿಸಬಹುದು. ಆದರೆ, ಸದನದ ಸಂಪೂರ್ಣ ಕಾಲಾವಧಿವರೆಗೆ ಅನರ್ಹಗೊಳಿಸುವ ಹಕ್ಕು ಸ್ಪೀಕರ್ಗಿಲ್ಲ. ಹೀಗಾಗಿ 2023ರವರೆಗೆ ಅವರ ಅನರ್ಹತೆಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಉಪಚುನಾವಣೆಗೆ ಅನರ್ಹ ಶಾಸಕರು ಸ್ಪರ್ಧಿಸಬಹುದು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಹೀಗಾಗಿ ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ಹೀಗಾಗಿ ಈ ಅನರ್ಹ ಶಾಸಕರು ನವೆಂಬರ್ 11 ರಿಂದ 18 ರೊಳಗೆ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಬಳಿಕ ಉಪಚುನಾವಣೆಯಲ್ಲಿ ಗೆದ್ದರೆ ಸಚಿವರೂ ಆಗಬಹುದು ಎಂದು ಕೋರ್ಟ್ ಹೇಳಿದೆ.
ಅನರ್ಹ ಶಾಸಕರ ಹಿನ್ನೆಲೆ:
ಕಾಂಗ್ರೆಸ್ನ 13, ಜೆಡಿಎಸ್ನ 3 ಹಾಗೂ ಓರ್ವ ಪಕ್ಷೇತರ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಖ್ಯಾಬಲದ ಕೊರತೆಯಿಂದ ಅನಿವಾರ್ಯವಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕುಮಾರಸ್ವಾಮಿ ನಾಯಕತ್ವದ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು. ಈ ಎಲ್ಲಾ ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ ಎಂದು ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಈ ಎಲ್ಲಾ ಶಾಸಕರನ್ನೂ ಅನರ್ಹಗೊಳಿಸಿದ್ದರು. ಆದರೆ ತಮ್ಮ ಅನರ್ಹತೆ ಪ್ರಶ್ನಿಸಿ ಈ ಎಲ್ಲಾ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್.ರಮಣ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.
ಅನರ್ಹಗೊಂಡಿದ್ದ ಶಾಸಕರು ಯಾರ್ಯಾರು:
- ಭೈರತಿ ಬಸವರಾಜ್ -ಕೆ.ಆರ್. ಪುರಂ
- ಶ್ರೀಮಂತ ಪಾಟೀಲ್ -ಕಾಗವಾಡ
- ಡಾ. ಕೆ ಸುಧಾಕರ್ -ಚಿಕ್ಕಬಳ್ಳಾಪುರ
- ಎಸ್. ಟಿ. ಸೋಮಶೇಖರ್ - ಯಶವಂತಪುರ
- ಮಹೇಶ್ ಕುಮಟಳ್ಳಿ -ಅಥಣಿ
- ಆನಂದ್ ಸಿಂಗ್ -ವಿಜಯನಗರ
- ಆರ್ ಶಂಕರ್ -ರಾಣೆಬೆನ್ನೂರು
- ಬಿ.ಸಿ. ಪಾಟೇಲ್ -ಹಿರೇಕೆರೂರು
- ಹೆಚ್ ವಿಶ್ವನಾಥ್ -ಹುಣಸೂರು
- ಕೆ. ಗೋಪಾಲಯ್ಯ -ಮಹಾಲಕ್ಷ್ಮಿ ಲೇಔಟ್
- ಎಂ.ಟಿ.ಬಿ. ನಾಗರಾಜ್ -ಹೊಸಕೋಟೆ
- ರೋಷಣ್ ಬೇಗ್ -ಶಿವಾಜಿನಗರ
- ರಮೇಶ್ ಜಾರಕಿಹೊಳಿ -ಗೋಕಾಕ್
- ಶಿವರಾಮ್ ಹೆಬ್ಬಾರ್ -ಯಲ್ಲಾಪುರ
- ನಾರಾಯಣ ಗೌಡ -ಕೆ ಆರ್ ಪೇಟೆ
- ಪ್ರತಾಪ್ ಗೌಡ ಪಾಟೀಲ್ -ಮಸ್ಕಿ
- ಮುನಿರತ್ನ -ಆರ್ ಆರ್ ನಗರ