ಮುಂಬೈ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅಂತಿಮ ಕಸರತ್ತು ನಡೆಯುತ್ತಿದ್ದು, ಬಿಜೆಪಿಯನ್ನು ಹೊರಗಿಟ್ಟು ಶಿವಸೇನೆ ಪಾರ್ಟಿ ಎನ್ಸಿಪಿ ಜೊತೆ ಸರ್ಕಾರ ರಚಿಸಲು ಭಾರಿ ಪ್ರಯತ್ನ ನಡೆಸುತ್ತಿದೆ.
ಶಿವಸೇನಾ ಸಂಸದ ಸಂಜಯ್ ರಾವುತ್ ಇಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿ ನಡೆಸಿದ ಮಾತುಕತೆ ವಿಫಲವಾಗಿದೆ.
ಈ ಮೊದಲೇ ಹೇಳಿದ ಮಾತಿಗೆ ಬದ್ಧವಾಗಿರುವ ಶರದ್ ಪವಾರ್, ಜನಾದೇಶ ತಾವು ತಲೆಬಾಗಿ ಪ್ರತಿಪಕ್ಷದಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಶಿವಸೇನೆಯ ಸರ್ಕಾರ ರಚನೆಯ ಎರಡನೇ ಸರ್ಕಸ್ ವಿಫಲವಾಗಿದೆ.
ಸುದ್ದಿಗೋಷ್ಠಿಯಲ್ಲಿ ಪವಾರ್ ಸ್ಪಷ್ಟ ನುಡಿ:
"ಬಿಜೆಪಿ-ಶಿವಸೇನೆಗೆ ಮತದಾರರು ಮಣೆ ಹಾಕಿದ್ದಾರೆ. ಹೀಗಾಗಿ ಅವರೇ ಶೀಘ್ರದಲ್ಲಿ ಸರ್ಕಾರ ರಚನೆ ಮಾಡಬೇಕು. ನಾವು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿದ್ದೇವೆ" ಎಂದು ಪವಾರ್ ಸ್ಪಷ್ಟವಾಗಿ ಹೇಳಿದ್ದಾರೆ.
"ಶಿವಸೇನೆ-ಎನ್ಸಿಪಿ ಮೈತ್ರಿ ಸರ್ಕಾರ ಎನ್ನುವ ಆಲೋಚನೆಯೇ ಇಲ್ಲ. ಬಿಜೆಪಿ-ಶಿವಸೇನೆ ಕಳೆದ 25 ವರ್ಷದಿಂದ ಒಟ್ಟಾಗಿಯೇ ಇದ್ದಾರೆ. ಇವತ್ತಲ್ಲ ನಾಳೆ ಅವರು ಮತ್ತೆ ಒಂದಾಗುತ್ತಾರೆ" ಎಂದು ಪವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಸಂಜಯ್ ರಾವುತ್ ಮುಂದಿನ ರಾಜ್ಯಸಭಾ ಅಧಿವೇಶನ ಬಗ್ಗೆ ಇಂದು ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆಲವೊಂದು ನ್ಯೂನ್ಯತೆಯ ಬಗ್ಗೆ ನಾವಿಬ್ಬರೂ ಚರ್ಚಿಸಿದ್ದೇವೆ" ಎಂದು ಪವಾರ್ ಹೇಳಿದ್ದಾರೆ.