ಜೈಪುರ : ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬಣದ ಶಾಸಕರು ರೆಸಾರ್ಟ್ ಒಂದರಲ್ಲಿ ಕುಳಿತು ಚರ್ಚಿಸುತ್ತಿರುವ ವಿಡಿಯೋ ಒಂದು ಈಗ ಹರಿದಾಡುತ್ತಿದೆ.
ವಿಡಿಯೋದಲ್ಲಿ ಕಂಡು ಬಂದಿರುವ ಶಾಸಕರು ಸಚಿನ್ ಪೈಲಟ್ ಬಣದವರು ಎಂದು ಹೇಳಲಾಗ್ತಿದೆ. ವಿಡಿಯೋದಲ್ಲಿ ಶಾಸಕರಾದ ರಾಕೇಶ್ ಪರೀಕ್, ಮುರಾರಿ ಲಾಲ್ ಮೀನಾ, ಜಿ.ಆರ್.ಖತಾನಾ, ಇಂದ್ರಜ್ ಗುರ್ಜಾರ್, ಹರೀಶ್ ಮೀನಾ, ದೀಪೇಂದರ್ ಸಿಂಗ್ ಶೇಖಾವತ್, ವಿಜೇಂದ್ರ ಓಲಾ, ಪಿ.ಆರ್ ಮೀನಾ ಕಾಣಿಸಿಕೊಂಡಿದ್ದಾರೆ. ಆದರೆ, ಸಚಿನ್ ಪೈಲಟ್ ಮತ್ತು ರಮೇಶ್ ಮೀನಾ ಕಂಡು ಬಂದಿಲ್ಲ.
ಸೋಮವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ಸಭೆಯಲ್ಲಿ ಸಚಿನ್ ಪೈಲಟ್ ಬಣ ಭಾಗವಹಿಸಿರಲಿಲ್ಲ. ಹಾಗಾಗಿ ಮಂಗಳವಾರ (ಇಂದು) ಮತ್ತೆ ಸಭೆ ಕರೆಯಲಾಗಿದೆ. ಸಭೆಗೆ ಸಚಿನ್ ಪೈಲಟ್ ಮತ್ತು ಅವರ ಬಣದ ಶಾಸಕರನ್ನು ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ. ಆದರೆ ಮಂಗಳವಾರದ ಸಭೆಯಲ್ಲಿ ಸಚಿನ್ ಪೈಲಟ್ ಬಣ ಭಾಗವಹಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಸಚಿನ್ ಪೈಲಟ್ ಬೆಂಬಲಿಗರ ವಿಡಿಯೋ ವೈರಲ್ ಸಿಎಂ ಗೆಹ್ಲೋಟ್‌ನಿಂದ ದೂರ ಉಳಿದ ಬಿಟಿಪಿ :
ರಾಜ್ಯ ರಾಜಕೀಯ ಬಿಕ್ಕಟ್ಟಿನ ನಡುವೆ ಕಾಂಗ್ರೆಸ್ ಮಿತ್ರ ಪಕ್ಷ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಕೂಡ ಸಿಎಂ ಗೆಹ್ಲೋಟ್ ಅವರಿಂದ ದೂರ ಉಳಿದಿದೆ. ಇಬ್ಬರು ಬಿಟಿಪಿ ಶಾಸಕರಾದ ರಾಜಕುಮಾರ್ ರಾಟ್ ಮತ್ತು ರಾಮ್ ಪ್ರಸಾದ್ ಕಾಂಗ್ರೆಸ್ ಬೆಂಬಲದೊಂದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು.