ನವದೆಹಲಿ:ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಭವಿಷ್ಯಕ್ಕೆ ಸಿದ್ಧವಾಗಿದ್ದು, 21ನೇ ಶತಮಾನದ ಭಾರತದ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ಹೊಸ ಮಾರ್ಗ ನೀಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಪಾಲರ ಸಮಾವೇಶದಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣವಾಗಲಿ, ಉನ್ನತ ಶಿಕ್ಷಣವಾಗಲಿ ಅನುಷ್ಠಾನಕ್ಕೆ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿದೆ. ಇದನ್ನು ಕೊನೆಯವರೆಗೂ ಮತ್ತು ಹಂತ ಹಂತವಾಗಿ ಕಾರ್ಯಗತಗೊಳಿಸಲು, ಶಿಕ್ಷಣ ಸಚಿವಾಲಯ 300ಕ್ಕೂ ಹೆಚ್ಚು ಅಂಶಗಳನ್ನು ರಚಿಸಿದ್ದು, ಅದನ್ನು ಒಂದು ವಾರದೊಳಗೆ ರಾಜ್ಯ ಸರ್ಕಾರಗಳಿಗೆ ನೀಡಲಾಗುವುದು ಎಂದಿದ್ದಾರೆ.
ಈ 300 ಅಂಶಗಳ ಬಗ್ಗೆ ಶಿಕ್ಷಣ ಸಚಿವಾಲಯವು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಲಿದ್ದು, ನಂತರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರ ಜೊತೆಗೆ ಎನ್ಇಪಿ-2020 ದೇಶವನ್ನು ಬಹುಭಾಷಾ, ಭರವಸೆಯನ್ನಾಗಿ ಮಾಡುತ್ತದೆ. ಇದು ಭಾರತೀಯತೆಯ ಆಧಾರದ ಮೇಲೆ ನಿಲ್ಲುತ್ತದೆ ಮತ್ತು ಅಂತಾರಾಷ್ಟ್ರೀಯ ಮಿತಿಗಳನ್ನು ತಲುಪಲಿದ್ದು, ಎಲ್ಲವನ್ನೂ ಒಳಗೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಾಣಿಜ್ಯೀಕರಣ ಇಲ್ಲವೆಂಬುದನ್ನು ಮನಗಾಣಬೇಕು ಎಂದು ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.