ತಿರುವನಂತಪುರಂ(ಕೇರಳ): ಇಡೀ ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ದೇವರ ನಾಡು ಕೇರಳದಲ್ಲಿಂದು, ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಬದಲಾಗಿ ಆರು ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಕೇರಳದಲ್ಲಿಂದು ಸಿಗದ ಕೋವಿಡ್ ಕೇಸ್... ಕೊರೊನಾ ಮೆಟ್ಟಿ ನಿಂತ ದೇವರ ನಾಡು!? - ದೇವರ ನಾಡು ಕೇರಳ
ಮಹಾಮಾರಿ ಕೊರೊನಾದಿಂದ ಭಾರತ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದು, ಇದರ ಮಧ್ಯೆ ಕೇರಳದಲ್ಲಿ ಇಂದು ಯಾವುದೇ ರೀತಿಯ ಹೊಸ ಪ್ರಕರಣ ಕಾಣಿಸಿಕೊಂಡಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಎಲ್ಲ ಮಾರ್ಗಸೂಚಿ ತಪ್ಪದೇ ಪಾಲನೆ ಮಾಡಿರುವ ಕೇರಳದಲ್ಲಿ ಇಂದು ಯಾವುದೇ ರೀತಿಯ ಕೇಸ್ ಕಂಡ ಬರದಿರುವುದು ಅಲ್ಲಿನ ಜನರಲ್ಲಿ ನಿರಾಳತೆ ಮೂಡಿಸಿದೆ. ರಾಜ್ಯದಲ್ಲಿ ಒಟ್ಟು 497 ಪ್ರಕರಣ ಕಂಡು ಬಂದಿದ್ದವು. ಇದರಲ್ಲಿ 383 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಕೇವಲ 110 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ಇನ್ನು ಕೇರಳದಲ್ಲಿ ಪತ್ತೆಯಾಗಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಕಾಸರಗೋಡು ಜಿಲ್ಲೆಯಲ್ಲಿ 166 ಪ್ರಕರಣ ಕಂಡು ಬಂದಿದ್ದವು. ಇದರಲ್ಲಿ ಅನೇಕರು ಗುಣಮುಖರಾಗಿದ್ದಾರೆ. ಉಳಿದಂತೆ ದೇಶದಲ್ಲಿ ಒಟ್ಟು 35,365 ಕೋವಿಡ್ ಪ್ರಕರಣ ಕಂಡು ಬಂದಿದ್ದು, ಇದರಲ್ಲಿ 25,148 ಆ್ಯಕ್ಟೀವ್ ಪ್ರಕರಣಗಳಿವೆ. ಜತೆಗೆ 9,065 ಜನರು ಗುಣಮುಖರಾಗಿದ್ದು, 1,152 ಜನರು ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 10,498 ಜನರು ಸೋಂಕಿನಿಂದ ಬಳಲುತ್ತಿದ್ದಾರೆ.