ನವದೆಹಲಿ:ಪ್ರಪಂಚದಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಅತಿ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇದರ ಮಧ್ಯೆ ವಿಜ್ಞಾನಿಗಳು ಹೊರಹಾಕಿರುವ ಸಂಶೋಧನೆಯೊಂದು, ಜನರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.
ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಬಂದಿರುವ ಕೆಲವರಲ್ಲಿ ಮತ್ತೊಮ್ಮೆ ಮಹಾಮಾರಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ನಮ್ಮ ಮುಂದೆ ಕಾಣಸಿಕ್ಕಿವೆ. ಇದೀಗ ವಿಜ್ಞಾನಿಗಳ ಸಂಶೋಧನೆ ಪ್ರಕಾರ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ವೀರ್ಯದಲ್ಲೂ ಕೊರೊನಾ ಸೋಂಕು ಜೀವಂತವಾಗಿರುತ್ತದೆ ಎಂಬುದು ಸಾಬೀತಾಗಿದೆ.
ಹೀಗಾಗಿ ವ್ಯಕ್ತಿ ಸೋಂಕಿನಿಂದ ಮನೆಗೆ ವಾಪಸ್ ಆಗಿ ಸಂಗಾತಿಗಳೊಂದಿಗೆ ಲೈಂಗಿಕ ಪ್ರಕ್ರಿಯೆ ನಡೆಸುವುದರಿಂದ ಸಂಗಾತಿಗೂ ಮಹಾಮಾರಿ ಕೊರೊನಾ ಹಬ್ಬುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಸಂಶೋಧನೆಯಿಂದ ದೃಢವಾಗಿದೆಯಂತೆ
ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಕೆಲ ವ್ಯಕ್ತಿಗಳನ್ನ ಆಯ್ಕೆ ಮಾಡಿಕೊಂಡು ಪರೀಕ್ಷೆ ಮಾಡಿದಾಗ ಗುಣಮುಖರಾದ ಕೆಲವರ ವೀರ್ಯದಲ್ಲಿ ಕೊರೊನಾ ವೈರಸ್ ಇರುವುದು ಕನ್ಫರ್ಮ್ ಆಗಿದೆ. ಹೀಗಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುವ ವೇಳೆ ಕಡ್ಡಾಯವಾಗಿ ಕಾಂಡೋಮ್ ಬಳಸಬೇಕು ಎಂದು ಮಾಹಿತಿ ನೀಡಿದ್ದಾರೆ. ಚೀನಾದಲ್ಲಿ ವೈರಸ್ನಿಂದ ಗುಣಮುಖರಾಗಿ ಮನೆಯಲ್ಲಿರುವವರಿಗೆ ಅಲ್ಲಿನ ಸರ್ಕಾರ ಕಡ್ಡಾಯವಾಗಿ ಕಾಂಡೋಮ್ ಬಳಸುವಂತೆ ಸಲಹೆ ನೀಡಿದೆ.
ವ್ಯಕ್ತಿಯಲ್ಲಿ ಎಷ್ಟು ದಿನದವರೆಗೂ ಕೋವಿಡ್ ವೈರಸ್ ಜೀವಂತವಾಗಿರುತ್ತದೆ ಎಂಬುದರ ಬಗ್ಗೆ ಸಂಶೋಧನೆ ಮುಂದುವರಿದಿದ್ದು, ಅಲ್ಲಿಯವರೆಗೂ ಈ ಸೋಂಕಿಗೆ ಒಳಗಾಗಿ ಗುಣಮುಖರಾಗಿರುವವರು ಎಚ್ಚರದಿಂದ ಇರುವುದು ಒಳ್ಳೆಯದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.