ನವದೆಹಲಿ:ಭಾರತೀಯ ವಾಯುಸೇನೆಗೆ ಆಗಮಿಸಿರುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಸೇನೆಯ ಬಲ ಹೆಚ್ಚಿಸಿವೆ. ಇದೀಗ ರಫೇಲ್ ವಿಮಾನಗಳು ಅಧಿಕೃತವಾಗಿ ಸೇನೆಗೆ ಸೇರ್ಪಡೆಗೊಳ್ಳಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ಸೆಪ್ಟೆಂಬರ್ 10ರಂದು ಸೇನೆಗೆ ರಫೇಲ್ ವಿಮಾನಗಳು ಸೇರ್ಪಡೆಗೊಳ್ಳುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಮಾನಗಳನ್ನು ಸೇನೆಗೆ ಹಸ್ತಾಂತರಿಸಲಿದ್ದಾರೆ.
ಹರಿಯಾಣದ ಅಂಬಾಲ ಏರ್ಬೇಸ್ನಲ್ಲಿ ಈ ಸಮಾರಂಭ ನಡೆಯಲಿದ್ದು, ಸಮಾರಂಭಕ್ಕೆ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿಗೂ ಆಹ್ವಾನ ನೀಡಲಾಗಿದೆ. ಸದ್ಯ ರಕ್ಷಣಾ ಸಚಿವರು ಈ ಮೊದಲು ನಿಗದಿಗೊಳಿಸಿರುವ ಸೆ. 4-6ರ ರಷ್ಯಾ ಪ್ರವಾಸದ ಬಳಿಕ ಈ ಕಾರ್ಯಕ್ರಮ ಜರುಗಲಿದೆ.
ರಫೇಲ್ ಯುದ್ಧ ವಿಮಾನ ಸೇನೆಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಮುಖ್ಯ ಅತಿಥಿಗಳಾಗಿರಲಿದ್ದು, ಫ್ರಾನ್ಸ್ ರಕ್ಷಣಾ ಸಚಿವರೂ ಸಹ ಭಾಗಿಯಾಗಲಿದ್ದಾರೆ. ಈ ಮೂಲಕ ಫ್ರಾನ್ಸ್ ಮತ್ತು ಭಾರತದೊಂದಿಗಿನ ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ.
ಜುಲೈ 29ರಂದು ಫ್ರಾನ್ಸ್ನಿಂದ 5 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದು, 17 ಗೋಲ್ಡನ್ ಸ್ಕ್ವಾಡ್ರನ್ಗೆ ಈ ರಫೇಲ್ ವಿಮಾನಗಳು ಸೇರ್ಪಡೆಗೊಳ್ಳಲಿವೆ. ಈ 5 ಯುದ್ಧ ವಿಮಾನಗಳಲ್ಲಿ 3 ಸಿಂಗಲ್ ಸೀಟರ್ ಆಗಿದ್ದರೆ, 2 ಡಬಲ್ ಸೀಟರ್ ಆಗಿವೆ.
ಭಾರತ 2016ರಲ್ಲಿ 60 ಸಾವಿರ ಕೋಟಿ ರೂ. ಮೌಲ್ಯದ ಅತೀ ದೊಡ್ಡ ಒಪ್ಪಂದದ ಮೂಲಕ 30 ಯುದ್ಧ ವಿಮಾನ ತರಿಸಿಕೊಳ್ಳಲು ನಿರ್ಧರಿಸಿತ್ತು.