ನವದೆಹಲಿ:ರಕ್ಷಣಾ ಇಲಾಖೆಯು ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಈ ನಿಟ್ಟಿನಲ್ಲಿ ದೇಶಿಯವಾಗಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮಾಡುವ ಸಲುವಾಗಿ 101 ವಸ್ತುಗಳ ಆಮದನ್ನು ನಿರ್ಬಂಧಿಸಲಾಲಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ರಕ್ಷಣಾ ಸಚಿವಾಲಯವು 101 ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇವುಗಳ ಆಮದನ್ನು ನಿರ್ಬಂಧಿಸಲಾಗಿದೆ. ರಕ್ಷಣೆಯಲ್ಲಿ ಸ್ವಾವಲಂಬನೆಗೆ ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.
ರಕ್ಷಣಾ ಇಲಾಖೆಯ ವಿವಿಧ ಷೇರುದಾರರು, ಸೇನೆ, ಸರ್ಕಾರಿ ಹಾಗೂ ಖಾಸಗಿ ಉದ್ಯಮಗಳೊಂದಿಗೆ ಚರ್ಚಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ದೇಶದ ಪ್ರಸ್ತುತ ಸಾಮರ್ಥ್ಯವನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ತಮ್ಮದೇ ಆದ ವಿನ್ಯಾಸ ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದು. ಡಿಆರ್ಡಿಒ ಮೂಲಕ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಲಾಗುತ್ತದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.