ಜೈಪುರ(ರಾಜಸ್ಥಾನ):ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನವಿದ್ಯುತ್ ಬಿಲ್ ಕಟ್ಟಲು ಮೇ ತಿಂಗಳವರೆಗೆ ಕಾಲಾವಕಾಶ ನೀಡಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಆದೇಶ ಹೊರಡಿಸಿದ್ದು, ಕೃಷಿಗಾಗಿ ಬಳಸುವ ವಿದ್ಯುತ್ ಶುಲ್ಕಗಳಿಗೂ ಇದು ಅನ್ವಯವಾಗಲಿದ್ದು, ಸುಮಾರು 13 ಲಕ್ಷ ಕೃಷಿಕರು ಇದರ ಲಾಭ ಪಡೆದುಕೊಳ್ಳಲಿದ್ದಾರೆ.
ಮನೆಗಳಲ್ಲಿ 150 ಯುನಿಟ್ ವಿದ್ಯುತ್ ಬಳಸುವ 1.05 ಕೋಟಿ ಬಳಕೆದಾರರಿಗೆ ಮಾತ್ರ ಸರ್ಕಾರದ ಈ ನಿರ್ಧಾರ ಅನ್ವಯವಾಗಲಿದೆ. ಅವರು ಮೇ ತಿಂಗಳಿನಲ್ಲಿ ಬಿಲ್ ಪಾವತಿಸಬಹುದಾಗಿದೆ. ಜೊತೆಗೆ ಕೈಗಾರಿಕೆಗಳಿಗೂ ಸ್ವಲ್ಪ ಮಟ್ಟಿಗೆ ರಿಲೀಫ್ ಒದಗಿಸಲಾಗಿದೆ. ಮೇ ತಿಂಗಳಲ್ಲಿ ವಿದ್ಯುತ್ ಬಿಲ್ ಕಟ್ಟುವ ಗ್ರಾಹಕರಿಗೆ ಶೇಕಡಾ 5ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ.
ಇದರ ಜೊತೆಗೆ ರಾಜ್ಯದ ಎಲ್ಲ ಕುಟುಂಬಗಳ ನೀರಿನ ಬಿಲ್ ಅನ್ನು ಮನ್ನಾ ಮಾಡಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬಿಲ್ ಅನ್ನು ಗ್ರಾಹಕರು ಕಟ್ಟುವ ಹಾಗಿಲ್ಲ. ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯ ವಿಮಾ ಕಂತುಗಳ ಹಣವನ್ನೂ ರಾಜ್ಯ ಸರ್ಕಾರವೇ ತುಂಬಲು ನಿರ್ಧರಿಸಿದೆ.