ನವದೆಹಲಿ:ದೇಶಾದ್ಯಂತ ಇಂದಿನಿಂದ ಅನ್ಲಾಕ್ 5.0 ಜಾರಿಗೊಂಡಿದ್ದು, ಕೇಂದ್ರ ಗೃಹ ಸಚಿವಾಲಯ ಮತ್ತಷ್ಟು ಸಡಲಿಕೆ ನೀಡಿ ಆದೇಶ ಹೊರಡಿಸಿದೆ. ಇದೀಗ ಕೇಂದ್ರ ರೈಲ್ವೆ ಇಲಾಖೆ ಸಹ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಿದೆ.
ಅಕ್ಟೋಬರ್ 15ರಿಂದ ನವೆಂಬರ್ 30ರವರೆಗೆ ಹೊಸದಾಗಿ 200 ರೈಲು ಓಡಾಟ ಆರಂಭಿಸಲು ನಿರ್ಧರಿಸಿದೆ. ಹಬ್ಬದ ದಿನಗಳಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಚೇರಮನ್ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಯಾದವ್, ಎಲ್ಲ ವಲಯಗಳ ಜನರಲ್ ಮ್ಯಾನೇಜರ್ಗಳೊಂದಿಗೆ ಸಭೆ ನಡೆಸಲಾಗಿದ್ದು, ವರದಿ ನೀಡಲು ಸೂಚನೆ ನೀಡಲಾಗಿದೆ. ರಜಾ ದಿನಗಳಲ್ಲಿ ಎಷ್ಟು ರೈಲು ಅವಶ್ಯಕತೆ ಇದೆ ಎಂಬುದರ ಬಗ್ಗೆ ನಿರ್ಧರಿಸಲು ತಿಳಿಸಲಾಗಿದೆ ಎಂದಿದ್ದಾರೆ.
ಕೊರೊನಾ ವೈರಸ್ ಹಾವಳಿ ಕಾರಣ ದೇಶದಲ್ಲಿ ಪ್ಯಾಸೆಂಜರ್ ರೈಲು ಓಡಾಟ ಸ್ಥಗಿತಗೊಳಿಸಲಾಗಿದ್ದು, 310 ವಿಶೇಷ ರೈಲು ಓಡಾಟ ನಡೆಸಿವೆ ಎಂದು ತಿಳಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಪ್ರಯಾಣಿಕರ ಸೇವೆ ಸ್ಥಗಿತಗೊಂಡಿದ್ದರಿಂದ ಭಾರತೀಯ ರೈಲ್ವೆ ಸರಕು ಮತ್ತು ಸಾಗಣೆಯಿಂದ 9896.86 ಕೋಟಿ ರೂ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ. 13.54ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.