ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: PUBG ಮತ್ತು ಭಾರತ; ಇದರಿಂದಾದ ಅನಾಹುತಗಳು ಒಂದೆರಡಲ್ಲ

PUBG, ಲಾಕ್​ಡೌನ್ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಆಡಲಾದ ಮೊಬೈಲ್​ ಗೇಂ. ಲಾಕ್​ಡೌನ್ ವೇಳೆ ಸುಮಾರು 22 ಲಕ್ಷ ಜನರು PUBG ಆಡಿದ್ದಾರೆ. ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಆಡುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಕೋವಿಡ್​ನಿಂದಾಗಿ ಲಾಕ್​ಡೌನ್​ ಹೇರಲಾಗಿತ್ತು. ಈ ವೇಳೆ ಜನರು ಮನೆಯಲ್ಲಿಯೇ ಇದ್ದಿದ್ದರಿಂದ, ಮಾರ್ಚ್‌ನಲ್ಲಿ PUBG ಆದಾಯವು ಸುಮಾರು 2,021 ಕೋಟಿ ರೂ. ತಲುಪಿದೆ ಎಂದು ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್‌ನ ಅಂಕಿ-ಅಂಶ ಬಹಿರಂಗಪಡಿಸಿದೆ.

PUBG
PUBG

By

Published : Sep 20, 2020, 10:23 PM IST

ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಗೆ ಧಕ್ಕೆ ತರುತ್ತಿದೆ ಎಂದು ಕೇಂದ್ರ ಸರ್ಕಾರವು PUBG ಮೊಬೈಲ್ ಗೇಂ​ ಸೇರಿದಂತೆ 116 ಇತರ ಚೀನಾ ಅಪ್ಲಿಕೇಶನ್‌ಗಳನ್ನು ದೇಶದಲ್ಲಿ ನಿಷೇಧಿಸಿತು. ಇದೇ ಕಾರಣಗಳನ್ನು ನೀಡಿ ಕಳೆದ ಜೂನ್ ಹಾಗೂ ಜುಲೈ ತಿಂಗಳಲ್ಲೂ ಕ್ರಮವಾಗಿ 59 ಮತ್ತು 47 ಅಪ್ಲಿಕೇಶನ್‌ಗಳನ್ನು ದೇಶದಲ್ಲಿ ನಿಷೇಧಿಸಿ, ಪ್ಲೇ ಸ್ಟೋರ್​ನಿಂದಲೇ ಡಿಲೀಟ್​ ಮಾಡಲಾಗಿತ್ತು.

ಚೀನಾದ ಕಂಪನಿಯಾದ ಟೆನ್ಸೆಂಟ್ ಒಡೆತನದ PUBG, 2017ರಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿತು. ಕೆಲವೇ ವರ್ಷಗಳಲ್ಲಿ, PUBG ಭಾರತದಲ್ಲಿ ಅತಿಹೆಚ್ಚು ಡೌನ್‌ಲೋಡ್ ಮಾಡಲಾದ ಮತ್ತು ಆಡಲಾದ ಮೊಬೈಲ್ ಗೇಂ​ಗಳಲ್ಲಿ ಒಂದಾಗಿದೆ. ಯುವಕರನ್ನು ಹೆಚ್ಚು ಆಕರ್ಷಣೆಗೊಳಪಡಿಸಿದ ಆ್ಯಪ್​ PUBG. ಭಾರತವು 5 ಕೋಟಿಗೂ ಹೆಚ್ಚು PUBG ಬಳಕೆದಾರರನ್ನು ಹೊಂದಿದೆ ಎಂದು ಅಂಕಿ-ಅಂಶಗಳು ತಿಳಿಸುತ್ತದೆ. ಅದರಲ್ಲಿ ಮೂರೂವರೆ ಕೋಟಿಯಷ್ಟು ಸಕ್ರಿಯ ಬಳಕೆದಾರರಿದ್ದಾರೆ. ಈ ಡೌನ್‌ಲೋಡ್‌ಗಳ ಸಂಖ್ಯೆಗೆ ಅನುಗುಣವಾಗಿ PUBG ಜನಪ್ರಿಯತೆ ಗಗನಕ್ಕೇರಿದ್ದರೂ, ಈ ಆಟದ ಗೀಳು ಹಲವಾರು ಅಹಿತಕರ ಘಟನೆಗಳಿಗೆ ಸಾಕ್ಷಿಯಾಯ್ತು. ಈ ಮೊಬೈಲ್​ ಗೇಂ ಕಾರಣದಿಂದಾಗಿ ಹಲವರು ಆತ್ಮಹತ್ಯೆ ಮಾಡಿಕೊಂಡರು. ಇನ್ನು ಕೆಲವರು ಇತರರನ್ನು ಕೊಲೆಯೂ ಮಾಡಿದ್ದರು. ಮತ್ತೂ ಕೆಲವರು ಆಟದಿಂದಾಗಿ ಅಘಾತಗಳಲ್ಲಿ ಪ್ರಾಣ ಕಳೆದುಕೊಂಡರು.

2019 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಅಂತಾರಾಷ್ಟ್ರೀಯ ರೋಗಗಳ ವರ್ಗೀಕರಣದಲ್ಲಿ (ಐಸಿಡಿ -11) ಗೇಮಿಂಗ್ ಅನ್ನು ವ್ಯವಸ್ಥಿತವಲ್ಲದ ಆ್ಯಪ್​ ಎಂದು ವರ್ಗೀಕರಿಸಿದೆ.

ದೇಶದಲ್ಲಿ ಪಬ್ಜಿಯಿಂದ ಸಂಭವಿಸಿದ ಕೆಲ ದುರ್ಘಟನೆಗಳು ಹೀಗಿವೆ...

PUBGಗಾಗಿ ಅಪ್ಪನ 16 ಲಕ್ಷ ರೂ. ಖರ್ಚು ಮಾಡಿದ ಪಂಜಾಬ್​ನ ಹದಿಹರೆಯ!

17 ವರ್ಷದ ಹದಿಹರೆಯನೊಬ್ಬ ತನ್ನ ಹೆತ್ತವರ ಖಾತೆಯಿಂದ PUBG ಆಡುವಾಗ ಬೇಕಾಗುವ ವಸ್ತುಗಳು, ಫಿರಂಗಿ, ಪಾಸ್‌ ಹಾಗೂ ವರ್ಚುವಲ್ ಮದ್ದುಗುಂಡುಗಳನ್ನು ಖರೀದಿಸಲು ತನ್ನ ಅಪ್ಪನ ಬ್ಯಾಂಕ್​ ಖಾತೆಯ ಹಣವನ್ನು ಖರ್ಚು ಮಾಡಿದ್ದ. ಹುಡುಗನ ತಂದೆಯ ವೈದ್ಯಕೀಯ ವೆಚ್ಚಗಳಿಗಾಗಿ ಆ ಹಣವನ್ನು ಉಳಿತಾಯ ಖಾತೆಯಲ್ಲಿ ಜಮಾ ಮಾಡಲಾಗಿತ್ತು. ಆದ್ರೆ ಬಾಲಕ ಅಪ್ಪನ ಖಾತೆಯಿಂದ ಹಣವನ್ನು ಆಟಕ್ಕಾಗಿ ಖರ್ಚು ಮಾಡಿದ್ದ.

ನೀರಿನ ಬದಲು ಆ್ಯಸಿಡ್​ ಕುಡಿಯುವಂತೆ ಮಾಡಿತ್ತು PUBG

ಕಳೆದ 2019ರ ಮಾರ್ಚ್ ತಿಂಗಳಲ್ಲಿ, PUBG ಆಟದಲ್ಲಿ ಮಗ್ನನಾದ ವ್ಯಕ್ತಿಯೊಬ್ಬ ನೀರು ಅಂದುಕೊಂಡು ನೀರಿನ ಬದಲು ಆ್ಯಸಿಡ್​ ಕುಡಿದು ತನ್ನ ಪ್ರಾಣಕ್ಕೆ ಸಂಚಕಾರ ತಂದಿಟ್ಟಿದ್ದ. ಮಧ್ಯಪ್ರದೇಶದ ಚಿಂದ್ವಾರಾದ 25 ವರ್ಷದ ವ್ಯಕ್ತಿ, ತಾನು ಸೇನೆಯಲ್ಲೇ ಹೋರಾಡುತ್ತಿದ್ದೇನೆ ಎಂದುಕೊಂದು ಆಟದ ಯುದ್ಧದಲ್ಲಿ ಸಂಪೂರ್ಣ ಮಗ್ನನಾಗಿದ್ದ. ಈ ವೇಳೆ ನೀರಿನ ಬಾಟಲಿಗೆ ಬದಲಾಗಿ ಆ್ಯಸಿಡ್ ಬಾಟಲಿಯನ್ನು ತೆಗೆದುಕೊಂಡು ಕುಡಿದಿದ್ದಾನೆ. ಅದೃಷ್ಟವಶಾತ್​ ಆತನ ಆಯಸ್ಸು ಗಟ್ಟಿಯಿತ್ತು. ಆ್ಯಸಿಡ್​ ಆತನ ಹೊಟ್ಟೆಯಲ್ಲೂ ಹುಣ್ಣುಗಳನ್ನು ಸೃಷ್ಟಿಸಿತ್ತು. ಕೆಲ ದಿನಗಳವರೆಗೆ ಆತನಿಗೆ ಏನನ್ನೂ ತಿನ್ನಲು ಸಾಧ್ಯವಾಗಿರಲಿಲ್ಲ. ವಿಪರ್ಯಾಸವೆಂದರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಆತ ಆಟದಲ್ಲಿ ಮಗ್ನನಾಗಿದ್ದ ಎಂದು ವರದಿ ಹೇಳುತ್ತದೆ.

PUBG ನಿಷೇಧಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

PUBG ನಿಷೇಧಪಡಿಸಿದ್ದಕ್ಕೆ ಮನನೊಂದು 21 ವರ್ಷದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯವನಾಗಿದ್ದು, ಇದೇ ವರ್ಷದ ಸೆಪ್ಟೆಂಬರ್ 4ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾರತದಲ್ಲಿ PUBG ಮೊಬೈಲ್ ಆ್ಯಪ್​ ನಿಷೇಧದಿಂದಾಗಿ ಬಾಲಕ ನಿರಾಶೆಗೊಂಡಿದ್ದಾನೆಂದು ವರದಿಯಾಗಿದೆ.

ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದ PUBG ಗೀಳು

ಜಮ್ಮುವಿನ ಫಿಟ್‌ನೆಸ್ ತರಬೇತುದಾರನಿಗೆ PUBG ಬಗ್ಗೆ ತುಂಬಾ ಗೀಳು ಇತ್ತು. ಎಲ್ಲಿಯವರೆಗೆ ಎಂದರೆ, ಆಡುವಾಗ ಆತ ತನಗೆ ತಾನೇ ಗಾಯ ಮಾಡಿಕೊಳ್ಳುತ್ತಿದ್ದ. ಆತನಲ್ಲಿ ಈ ವಿಚಿತ್ರ ಅಭ್ಯಾಸ ಅತಿರೇಕಕ್ಕೆ ತಲುಪಿ, ಆತ ಆಡುತ್ತಿದ್ದಾಗಲೇ ಹೊಡೆದುಕೊಳ್ಳುತ್ತಿದ್ದ. ಇದು ಆತನ ದೇಹದಲ್ಲಿ ಮಿತಿಮೀರಿ ಗಾಯಗಳಾಗುವಂತೆ ಮಾಡಿತು. ಹೀಗಾಗಿ 2019ರ ಜನವರಿ ತಿಂಗಳಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿತು. ಸತತವಾಗಿ 10 ದಿನಗಳ ಕಾಲ PUBG ಆಡಿ, ಆ ಫಿಟ್ನೆಸ್ ತರಬೇತುದಾರ ಮಾನಸಿಕವಾಗಿ ಅಸ್ಥಿರನಾಗಿದ್ದ.

PUBG ಬಗ್ಗೆ ಪ್ರಶ್ನಿಸಿದ್ದಕ್ಕೆ ಅಪ್ಪನ ಶಿರಚ್ಛೇದ ಮಾಡಿದ ಪಾಪಿ ಮಗ...

PUBG ಆಟದಲ್ಲೇ ನಿರತನಾಗುತ್ತಿದ್ದ ಮಗನನ್ನು ಪ್ರಶ್ನಿಸಿ ಬೈದಿದ್ದಕ್ಕೆ ತನ್ನ ಹೆತ್ತ ತಂದೆಯನ್ನೇ ಮಗ ತಲೆ ಕಡಿದು ಕೊಂದಿದ್ದ. ಇದು ನಡೆದಿದ್ದು ಬೇರೆಲ್ಲೂ ಅಲ್ಲ. ನಮ್ಮದೇ ರಾಜ್ಯದ ಬೆಳಗಾವಿ ಜಿಲ್ಲೆಯ ಕಾಕತಿ ಗ್ರಾಮದಲ್ಲಿ. 25 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ತಲೆ ಹಾಗೂ ಕಾಲುಗಳನ್ನು ಕತ್ತರಿಸಿ ಕೊಂದಿದ್ದಾನೆ. 61 ವರ್ಷದ ನಿವೃತ್ತ ಪೊಲೀಸ್, ಮಗನ PUBG ಗೀಳಿನಿಂದಾಗಿ ತೀವ್ರ ರಕ್ತಸ್ರಾವವಾಗಿ ಪ್ರಾಣ ಕಳೆದುಕೊಂಡಿದ್ದರು.

ಅಣ್ಣನನ್ನೇ ಕೊಂದ 15 ವಯಸ್ಸಿನ ತಮ್ಮ

PUBG ಆಡ್ಬೇಡ ಎಂದು ಬುದ್ದಿ ಹೇಳಿ ಬೈದಿದ್ದಕ್ಕೆ ತನ್ನ ಅಣ್ಣನನ್ನೇ ಕೇವಲ 15 ವರ್ಷ ವಯಸ್ಸಿನ ತಮ್ಮ ಕೊಂದಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ. ತಮ್ಮನಿಗೆ ಬುದ್ದಿ ಹೇಳಿ ಆತ ಆಡದಂತೆ ಅಣ್ಣ ನಿಲ್ಲಿಸಿದ್ದ. ಇದರಿಂದ ತುಂಬಾ ತಲೆಕೆಡಿಸಿಕೊಂಡಿದ್ದ ತಮ್ಮ ಅಣ್ಣನ ತಲೆಯನ್ನು ಗೋಡೆಗೆ ಬಡಿದು, ಕತ್ತರಿಯಿಂದ ಇರಿದು ಹತ್ಯೆಗೈದಿದ್ದ.

ಯುವಕನ ಸಾವಿಗೆ ಕಾರಣವಾದ PUBG

PUBG ಆಡುತ್ತಾ ಮಿದುಳಿನ ಪಾರ್ಶ್ವವಾಯುಗೆ ಒಳಗಾಗಿದ್ದ 25 ವರ್ಷದ ಯುವಕ, 2020ರ ಜನವರಿಯಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ. ಮಿದುಳಿನ ಅಂಗಾಂಶದೊಳಗಿನ ರಕ್ತಸ್ರಾವದಿಂದ ಉಂಟಾಗುವ ಮಾರಣಾಂತಿಕ ರೀತಿಯ ಪಾರ್ಶ್ವವಾಯುವಿನಿಂದ ಆತ ಸಾವನ್ನಪ್ಪಿದ್ದ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು.

ಉತ್ತರ ಪತ್ರಿಕೆಯಲ್ಲಿ PUBG ಬಗ್ಗೆ ಬರದ ಬಾಲಕ

ನಮ್ಮದೇ ರಾಜ್ಯದ ಬಾಲಕನೊಬ್ಬ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ಯಾವುದೋ ಪ್ರಶ್ನೆಗೆ PUBG ಬಗ್ಗೆ ಉತ್ತರ ಬರೆದಿದ್ದ. ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದ ಆ ಬಾಲಕ, ಶಿಕ್ಷಣದಲ್ಲಿ ಚತುರನಿದ್ದ. ಆದ್ರೆ ಆತನ PUBG ಗೀಳು ಆತನ ಓದಿನ ಹಾಗೂ ಬರವಣಿಗೆಯ ದಿಕ್ಕನ್ನೇ ಬದಲಿಸಿತ್ತು. ಮೊದಲ ವರ್ಷದ ಪಿಯು ಪರೀಕ್ಷೆಯಲ್ಲಿ ರಾಷ್ಟ್ರೀಯ ಆದಾಯ ಮತ್ತು ಜಿಡಿಪಿಯ ಬಗ್ಗೆ ವಿಸ್ತಾರವಾಗಿ ಬರೆಯಲು ಹೇಳಿದ್ದ ಪ್ರಶ್ನೆಗೆ ಹುಡುಗ ತನ್ನ ಉತ್ತರ ಪತ್ರಿಕೆಯಲ್ಲಿ PUBG ಬಗ್ಗೆ ಬರೆದಿದ್ದ. ತನ್ನ ಸುತ್ತಲಿನ ಎಲ್ಲ ವಿಚಾರಗಳ ಜಾಡನ್ನು ಕಳೆದುಕೊಂಡ ಬಾಲಕ PUBG ಬಗ್ಗೆಯೇ ತನ್ನ ತಲೆಯಲ್ಲಿ ತುಂಬಿಕೊಂಡಿದ್ದ.

ಸತತ 45 ದಿನ PUBG ಆಡಿ ಕುತ್ತಿಗೆ ನೋವಿನಿಂದ ಪ್ರಾಣ ಕಳೆದುಕೊಂಡ ಬಾಲಕ

ತೆಲಂಗಾಣದ ಬಾಲಕನೊಬ್ಬ ಸತತ 45 ದಿನಗಳ ಕಾಲ PUBG ಆಡಿ ಸಾವನ್ನಪ್ಪಿದ್ದಾನೆ. ಒಂದು ತಿಂಗಳಿಗೂ ಅಧಿಕ ಕಾಲ ಆಡಿದ ಬಾಲಕನಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ 2019ರ ಮಾರ್ಚ್​ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ದೀರ್ಘಕಾಲದವರೆಗೆ PUBG ಆಡುತ್ತಿದ್ದರಿಂದ ಆತನ ಕುತ್ತಿಗೆಯ ನರಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದವು ಎಂದು ಆಸ್ಪತ್ರೆ ವರದಿ ಹೇಳಿತ್ತು.

PUBGಯಲ್ಲಿ ಸೋತು ಖಿನ್ನತೆಗೊಳಗಾದ ಬಾಲಕ ಸಾವು

ಇದು ಮಹಾರಾಷ್ಟ್ರದಲ್ಲಿ ನಡೆದ ಘಟನೆ. PUBG ಆಟದಲ್ಲಿ ಸೋತ ನಂತರ ಖಿನ್ನತೆಗೆ ಒಳಗಾದ ಪೊಲೀಸ್​ ಸಿಬ್ಬಂದಿಯೊಬ್ಬರ ಪುತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. 7 ನೇ ತರಗತಿ ವಿದ್ಯಾರ್ಥಿ, 2020 ರ ಜುಲೈ ತಿಂಗಳಲ್ಲಿ ತನ್ನ ಮನೆಯಲ್ಲಿ ದುಪಟ್ಟಾವನ್ನು ಕಿಟಕಿಗೆ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಬ್ಜಿ ಆಟದಲ್ಲಿ ಸೋತ ನಂತರ ಆತ ಖಿನ್ನತೆಗೆ ಒಳಗಾಗಿದ್ದ. ಬಾಲಕ ಹೆಚ್ಚಿನ ಸಮಯ ಮೊಬೈಲ್ ಫೋನ್‌ನಲ್ಲಿ ಆಟ ಆಡುವುದರಲ್ಲೇ ಕಳೆಯುತ್ತಿದ್ದ ಎಂದು ತಿಳಿದು ಬಂದಿದೆ.

ಲಾಕ್‌ಡೌನ್‌ನಿಂದ PUBG ಮೇಲಾದ ಪರಿಣಾಮ...

PUBG, ಲಾಕ್​ಡೌನ್ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಆಡಲಾದ ಆಟವಾಗಿದೆ. ಲಾಕ್​ಡೌನ್ ವೇಳೆ ಸುಮಾರು 22 ಲಕ್ಷ ಜನರು PUBG ಆಡಿದ್ದಾರೆ. ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಆಡುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ. ಕೋವಿಡ್​ನಿಂದಾಗಿ ಲಾಕ್​ಡೌನ್​ ಹೇರಲಾಗಿತ್ತು. ಈ ವೇಳೆ ಜನರು ಮನೆಯಲ್ಲಿಯೇ ಇದ್ದಿದ್ದರಿಂದ, ಮಾರ್ಚ್‌ನಲ್ಲಿ PUBG ಆದಾಯವು ಸುಮಾರು 2,021 ಕೋಟಿ ರೂ. ತಲುಪಿದೆ ಎಂದು ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್‌ನ ಅಂಕಿ-ಅಂಶ ಬಹಿರಂಗಪಡಿಸಿದೆ.

PUBG ಮತ್ತು Fau G

ಭಾರತದಲ್ಲಿ ನಿಷೇಧಕ್ಕೊಳಗಾದ ನಂತರ, PUBG ಕಾರ್ಪೊರೇಷನ್ ಭಾರತದಿಂದ ಪಡೆಯುತ್ತಿದ್ದ ಆದಾಯವನ್ನು ಮತ್ತೆ ಪಡೆಯಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ. ಇತ್ತೀಚೆಗೆ PUBG ಗೇಂ ​ಅನ್ನು ಭಾರತದಲ್ಲಿ ಚೀನಾ ಮೂಲದ ಟೆನ್ಸೆಂಟ್ ಗೇಮ್ಸ್ ನಿಯಂತ್ರಿಸುವುದಿಲ್ಲ ಎಂದು ಸಂಸ್ಥೆ ಘೋಷಿಸಿತ್ತು. ದಕ್ಷಿಣ ಕೊರಿಯಾ ಮೂಲದ ಕಂಪನಿಯು ಎಲ್ಲಾ ಅಂಗಸಂಸ್ಥೆಗಳ ಸಂಪೂರ್ಣ ಉಸ್ತುವಾರಿಯನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿತ್ತು. ತನ್ನ ಒಟ್ಟು ಜಾಗತಿಕ ಬಳಕೆದಾರರಲ್ಲಿ PUBG 25% ಬಳಕೆದಾರರನ್ನು ಭಾರತದಿಂದಲೇ ಹೊಂದಿತ್ತು.

ನಟ ಅಕ್ಷಯ್ ಕುಮಾರ್ ಅವರು 'ಆತ್ಮನಿರ್ಭಾರ ಭಾರತ'ವನ್ನು ಬೆಂಬಲಿಸಲು PUBGಗೆ ಬದಲಿಯಾಗಿ Fau G ಮೊಬೈಲ್​ ಗೇಮ್​ಅನ್ನು ಘೋಷಿಸಿದ್ದಾರೆ. ಇದು ತನ್ನ ನಿವ್ವಳ ಆದಾಯದ ಶೇ. 20 ರಷ್ಟು ಹಣವನ್ನು 'ಭಾರತ್ ಕೆ ವೀರ್' ಟ್ರಸ್ಟ್​ಗೆ ನೀಡಲಿದೆ.

ಭಾರತದಲ್ಲಿ PUBG ಗಳಿಕೆ...

ಲೆಕ್ಕಾಚಾರಗಳ ಪ್ರಕಾರ ದೇಶದಲ್ಲಿ ಈವರೆಗೆ ನಿಷೇಧಿಸಲಾದ ಚೀನಾ ಅಪ್ಲಿಕೇಶನ್‌ಗಳು (ಮೊದಲ 59 ಅಪ್ಲಿಕೇಶನ್‌ಗಳು, ನಂತರದ 47 ಮತ್ತು ಇತ್ತೀಚೆಗಿನ 118 ಆ್ಯಪ್​ ಸೇರಿ) ಭಾರತದಿಂದ ವರ್ಷಕ್ಕೆ 200 ಮಿಲಿಯನ್‌ ಡಾಲರ್​ಗಿಂತ ಹೆಚ್ಚಿನ ಆದಾಯವನ್ನು ಗಳಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. PUBG ಗೇಂ​ ಜಾಗತಿಕವಾಗಿ ಈ ವರ್ಷದ ಮೊದಲಾರ್ಧದಲ್ಲಿ 1.3 ಬಿಲಿಯನ್ ಡಾಲರ್​ (ಸರಿಸುಮಾರು 9,731 ಕೋಟಿ ರೂ.) ಗಳಿಸಿದೆ. ಭಾರತದಲ್ಲಿ PUBG ಅತಿ ಹೆಚ್ಚು ಡೌನ್‌ಲೋಡ್‌ಗಳನ್ನು ಕಂಡಿದ್ದು, 175 ಮಿಲಿಯನ್ ಜನರು ಇನ್ಸ್ಟಾಲ್​ ಮಾಡಿದ್ದಾರೆ.

ABOUT THE AUTHOR

...view details