ಸೋನಾಭದ್ರ(ಯುಪಿ):ಉತ್ತರಪ್ರದೇಶದ ಸೋನಾಭದ್ರ ಜಿಲ್ಲೆಯ ಗೋರಾವಾಲಾ ಬ್ಲಾಕ್ನಲ್ಲಿ ಎರಡು ಕುಂಟುಬಗಳ ಮಧ್ಯೆ ಆಸ್ತಿಗಾಗಿ ಹೊಡೆದಾಟ ನಡೆದಿದ್ದು, ಘಟನೆಯಲ್ಲಿ ಮಹಿಳೆ ಸೇರಿದಂತೆ ಒಂದೇ ಕುಟುಂಬದ 9 ಮಂದಿ ಮೃತಪಟ್ಟು, 17 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಆಸ್ತಿಗಾಗಿ ಹೊಡೆದಾಟ: ಒಂದೇ ಕುಟುಂಬದ 9 ಮಂದಿ ಸಾವು, 17 ಜನರಿಗೆ ಗಂಭೀರ ಗಾಯ
ಆಸ್ತಿ ವಿಚಾರಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಜಗಳ ನಡೆದಿದ್ದು, ಅದು ತಾರಕಕ್ಕೇರಿದಾಗ 9 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಜಮೀನಿನ ವಿವಾದಕ್ಕಾಗಿ ಎರಡು ಕುಟುಂಬಗಳ ಮಧ್ಯೆ ಇಂದು ಬೆಳಗ್ಗೆ ಜಗಳ ಶುರುವಾಗಿದೆ. ಈ ವೇಳೆ ಒಂದು ಕುಟುಂಬದವರು ಬಂದೂಕಿನಿಂದ ಗುಂಡು ಹಾರಿಸಿರುವ ಪರಿಣಾಮ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜಗಳದ ವೇಳೆ ಎರಡು ಕುಟುಂಬಗಳಿಂದ 100ಮಂದಿ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಂಕಿತ್ ಕುಮಾರ್ ಅಗರವಾಲ್ ತಿಳಿಸಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾಗಿರುವ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.