ನ್ಯೂಯಾರ್ಕ್:ವಿಶ್ವಸಂಸ್ಥೆಯ 74ನೇ ಮಹಾ ಅಧಿವೇಶನದಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ತನ್ನ ಹಳೇ ಚಾಳಿ ಮುಂದುವರಿಸಿದರು. ಭಾಷಣದ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಣ್ವಸ್ತ್ರ ಯುದ್ಧವಾದರೂ ಆಗಬಹುದು. ಇದನ್ನು ತಡೆಗಟ್ಟಿ ಎಂದು ವಿಶ್ವಸಂಸ್ಥೆಯನ್ನ ಕೋರಿದರು. ತಾವು ಯುದ್ಧ ಆದರೆ ಎದುರಿಸಲು ಸಿದ್ಧವಿದ್ದು, ಕೊನೆ ಕ್ಷಣದವರೆಗೂ ಹೋರಾಡಿ ಪ್ರಾಣ ತೆರಲು ಸಿದ್ಧ ಎಂದು ಘೋಷಿಸಿದರು.
ಆರ್ಎಸ್ಎಸ್ ಒಂದು ಕಮ್ಯುನಿಸಂ ಸಂಸ್ಥೆ, ಅಡಾಲ್ಫ್ ಹಿಟ್ಲರ್, ಮುಸಲೋನಿ ಸಿದ್ದಾಂತಗಳನ್ನ ಬೆಂಬಲಿಸುತ್ತಿದ್ದು, ಅದರ ಹಿನ್ನೆಲೆಯಿಂದ ಪ್ರಧಾನಿ ನರೇಂದ್ರ ಮೋದಿ ಬಂದಿದ್ದು, ಹಿಂದೂ ಸಾಮ್ರಾಜ್ಯವನ್ನ ಸ್ಥಾಪಿಸುವ ಗುರಿ ಹೊಂದಿದ್ದಾರೆ ಎಂದು ಹೇಳಿದರು. ಆರ್ಎಸ್ಎಸ್ ಮುಸ್ಲಿಂರನ್ನು ದ್ವೇಷಿಸುತ್ತದೆ. ಅದರ ಐಡಿಯಾಲಜಿಯೇ ಮಹಾತ್ಮಗಾಂಧಿ ಅವರನ್ನ ಕೊಂದಿತು. ಆರ್ಎಸ್ಎಸ್ ಬಗ್ಗೆ ಹಿಂದಿನ ಗೃಹ ಸಚಿವರೇ ಈ ಮಾತು ಹೇಳಿದ್ದಾರೆ ಎಂದರು.
ನರೇಂದ್ರ ಮೋದಿ ಮೊಂಡಾಟ ಮಾಡ್ತಿದ್ದು, ಧರ್ಮಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಕಾಶ್ಮೀರದಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆಲ್ಲ ಗೊತ್ತೆ ಇದೆ. ಮಾನವ ಹಕ್ಕುಗಳ ಆಯೋಗ ಲಕ್ಷ ಲಕ್ಷ ಸಾವುಗಳ ಬಗ್ಗೆ ಹೇಳಿದೆ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದ್ದರೂ ಅಂತಾರಾಷ್ಟ್ರೀಯ ಸಮುದಾಯ ಸುಮ್ಮನಿದೆ. ಯಾಕೆಂದರೆ ಭಾರತದೊಂದಿಗಿನ ವ್ಯಾಪಾರ ಹಾಗೂ ಅತಿದೊಡ್ಡ ಜನ ಸಮುದಾಯ ಇದಕ್ಕೆ ಕಾರಣ. ಕಾಶ್ಮೀರದಲ್ಲಿ ಸಾವಿರಾರು ನಾಯಕರನ್ನ ಬಂಧಿಸಲಾಗಿದೆ. ಕಾಶ್ಮೀರದಲ್ಲಿ ಜನರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ. ಕಳೆದ ಐದು ವರ್ಷಗಳಲ್ಲಿ ಪೆಲಟ್ ಗುಂಡುಗಳನ್ನು ಹಾಕಲಾಗಿದೆ ಎಂದರು.