ಹೈದರಾಬಾದ್ :ಮುಂದಿನ 9 ತಿಂಗಳಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟು ವಿಶ್ವವ್ಯಾಪಿಯಾದ ಬಳಿಕ 116 ಮಿಲಿಯನ್ ಮಕ್ಕಳು ಹುಟ್ಟುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರ, ಬಾಣಂತಿಯರ ಹಾಗೂ ನವಜಾತ ಶಿಶುಗಳ ಜೀವ ರಕ್ಷಣೆಗೆ ಜೀವ ಸಂರಕ್ಷಿಸುವ ಸೇವೆಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಯುನಿಸೆಫ್ ಸರ್ಕಾರಗಳಿಗೆ ಹಾಗೂ ದಾನಿಗಳಿಗೆ ಮನವಿ ಮಾಡಿದೆ.
"ಬಾಣಂತಿಯರು ಹಾಗೂ ನವಜಾತ ಶಿಶುಗಳು ಕಠಿಣ-ಕ್ರೂರ ವಾಸ್ತವಗಳೊಂದಿಗೆ ಸ್ವಾಗತಿಸಲ್ಪಡುತ್ತಾರೆ. ಇದರಲ್ಲಿ ಜಾಗತಿಕ ರೋಗ ಹರಡುವಿಕೆ ನಿಧಾನ ಪ್ರಕ್ರಿಯೆಗಳಾದ ಲಾಕ್‍ಡೌನ್, ಕರ್ಫ್ಯೂ ಒಳಗೊಂಡಿದೆ. ಆರೋಗ್ಯ ಕೇಂದ್ರಗಳು, ಕೋವಿಡ್ -9ಗೆ ತುರ್ತು ಪ್ರತಿಕ್ರಿಯೆ ನೀಡಬೇಕಾದ ಒತ್ತಡದಲ್ಲಿರುತ್ತವೆ. ವೈದ್ಯಕೀಯ ಸಲಕರಣೆಗಳ ಪೂರೈಕೆಯಲ್ಲಿ ವ್ಯತ್ಯಯ, ಹೆರಿಗೆಗೆ ಸಹಾಯ ಮಾಡುವ ಕುಶಲ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರ ಕೊರತೆ ಬಾಧಿಸಲಿದೆ. ಯಾಕೆಂದರೆ, ಆರೋಗ್ಯ ಮಾನವ ಸಂಪನ್ಮೂಲವನ್ನು ಸಂಪೂರ್ಣವಾಗಿ ಕೋವಿಡ್ 19ರ ವಿರುದ್ಧದ ಯುದ್ದಕ್ಕೆ ಬಳಸಿಕೊಳ್ಳಲಾಗುತ್ತಿದೆ," ಎಂದು ಯುನಿಸೆಫ್ ತಿಳಿಸಿದೆ.
ಈ ಕೋವಿಡ್-19 ಬಿಕ್ಕಟ್ಟು ಆರಂಭವಾದ ಬಳಿಕ ಅತಿ ಹೆಚ್ಚಿನ ಶಿಶು ಜನನದ ಒತ್ತಡ ಎದುರಿಸುವ ದೇಶಗಳ ಪೈಕಿ ಭಾರತ (20.1 ಮಿಲಿಯನ್), ಚೀನಾ (13.5 ಮಿಲಿಯನ್), ನೈಜಿರಿಯಾ(6.4 ಮಿಲಿಯನ್), ಪಾಕಿಸ್ತಾನ (5 ಮಿಲಿಯನ್), ಹಾಗೂ ಇಂಡೋನೇಷ್ಯಾ (4 ಮಿಲಿಯನ್) ಪ್ರಮುಖವಾದುವು. ಕೋವಿಡ್-19 ಬಿಕ್ಕಟ್ಟು ಆರಂಭಕ್ಕೆ ಮುನ್ನವೇ ಈ ಎಲ್ಲಾ ದೇಶಗಳು ಅತೀ ಹೆಚ್ಚಿನ ನವಜಾತ ಶಿಶು ಮರಣಕ್ಕೆ ಕುಖ್ಯಾತಿ ಪಡೆದಿದ್ದವು. ಈ ಶಿಶುಮರಣದ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಉಂಟಾಗುವ ಸಾಧ್ಯತೆ ಕೋವಿಡ್-19 ಬಿಕ್ಕಟ್ಟು ಆರಂಭವಾದ ಬಳಿಕ ತಲೆದೋರಿದೆ.
ಈ ಬಿಕ್ಕಟ್ಟು ಶ್ರೀಮಂತ ದೇಶಗಳಿಗೆ ಕೂಡಾ ತಟ್ಟಲಿದೆ. ಮಾಚ್ 11 ಹಾಗೂ ಡಿಸೆಂಬರ್ 16ರ ನಡುವೆ ಅಮೆರಿಕಾದಲ್ಲಿ 3.3 ಮಿಲಿಯನ್ ಶಿಶುಗಳು ಹುಟ್ಟುವ ಸಾಧ್ಯತೆ ಇದೆ. ಈ ಮೂಲಕ ಅಮೆರಿಕಾ 6ನೇ ಸ್ಥಾನದಲ್ಲಿರಲಿದೆ. ನ್ಯೂಯಾರ್ಕ್‍ನಲ್ಲಿ ಅಧಿಕಾರಿಗಳು ಪರ್ಯಾಯ ಹೆರಿಗೆ ಆಸ್ಪತ್ರೆಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದಾರೆ. ಯಾಕೆಂದರೆ, ಗರ್ಭಿಣಿಯರು ಇತರ ಆಸ್ಪತ್ರೆಗಳಲ್ಲಿ ಹೆರಿಗೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್-19ರ ಬಗೆಗಿನ ಈವರೆಗಿನ ಅಧ್ಯಯನಗಳು, ಈ ಸಾಂಕ್ರಾಮಿಕ ರೋಗ ಗರ್ಭಿಣಿ ಮಹಿಳೆಯರಿಗೆ ಹೆಚ್ಚು ಹಬ್ಬುವುದಿಲ್ಲ ಎಂದು ಸೂಚಿಸುತ್ತಿವೆಯಾದರೂ, ಪ್ರಸವ ಪೂರ್ವ, ಪ್ರಸವ ಬಳಿಕ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಯುನಿಸೆಫ್ ವಿಶ್ವದ ಎಲ್ಲಾ ದೇಶಗಳ ಸರ್ಕಾರಗಳಿಗೆ ಹಾಗೂ ದಾನಿಗಳಿಗೆ ಕರೆ ನೀಡಿದೆ.
ಅನಾರೋಗ್ಯವಂತ ನವಜಾತ ಶಿಶುಗಳಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿರುತ್ತದೆ. ಆದರೆ, ಇದು ದೊರೆಯದಿದ್ದರೆ ಅಂತಹ ಮಕ್ಕಳು ಸಾವಿಗೀಡಾಗುವ ಸಾಧ್ಯತೆ ಇರುತ್ತದೆ ಎಂದು ಯನಿಸಫ್ ಎಚ್ಚರಿಸಿದೆ. ಹೊಸದಾಗಿ ಪೋಷಕರಾದವರಿಗೆ ಎಲ್ಲರ ನೆರವು ಬೇಕಿರುತ್ತದೆ. ಸ್ತನಪಾನ, ಔಷದೋಪಚಾರ, ಪೌಷ್ಟಿಕಾಂಶ, ಲಸಿಕೆಗಳನ್ನು ಸಕಾಲದಲ್ಲಿ ದೊರಕುವಂತೆ ಮಾಡುವುದರ ಮೂಲಕ, ನವಜಾತ ಶಿಶುಗಳನ್ನು ಆರೋಗ್ಯಕರವಾಗಿ ಇರಿಸಬೇಕಿದೆ.