ಕೇರಳ: ಎರಡು ತಿಂಗಳ ಶಬರಿಮಲೆ ತೀರ್ಥಯಾತ್ರೆ ಅಂಗವಾಗಿ ಶನಿವಾರ ಸಂಜೆ 5 ಗಂಟೆಗೆ ಅಯ್ಯಪ್ಪ ದೇವಸ್ಥಾನ ಪ್ರವೇಶವನ್ನು ಭಕ್ತರಿಗಾಗಿ ತೆರೆಯಲಾಯಿತು. ಸುಪ್ರೀಂಕೋರ್ಟ್ ತೀರ್ಪಿನ ಆದೇಶದಂತೆ ದೇವಸ್ಥಾನ ಪ್ರವೇಶಿಸಲು ಮುಂದಾದ ಮಹಿಳಾ ಭಕ್ತರಿಗೆ ಈ ಬಾರಿಯೂ ನಿರಾಸೆ ಉಂಟಾಗುವಂತಹ ಘಟನೆ ನಡೆಯಿತು.
ಶಬರಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ಆಂಧ್ರಪ್ರದೇಶದಿಂದ ಬಂದಿದ್ದ 10 ಮಹಿಳಾ ಭಕ್ತರನ್ನು ಪೊಲೀಸರು ಹಿಂದಕ್ಕೆ ಕಳುಹಿಸಿದ್ದಾರೆ. ಮಹಿಳಾ ಭಕ್ತರು ಪಂಪಾ ನದಿ ತಟದ ಶಿಬಿರದಿಂದ ದೇಗುಲಕ್ಕೆ ತೆರಳಲು ಚಾರಣ ಆರಂಭಿಸಿದ್ದರು. ಅಲ್ಲಿಯೇ ಮಹಿಳಾ ಪೊಲೀಸರು ತಡೆದು ತಪಾಸಣೆ ನಡೆಸಿ, ಗುರುತಿನ ಚೀಟಿ ತೋರಿಸುವಂತೆ ಸೂಚಿಸಿದರು. ಬಳಿಕ ಅಲ್ಲಿಂದಲೇ ಅವರನ್ನು ವಾಪಸ್ ಕಳುಹಿಸಿದ್ದಾರೆ.
ಒಳಗೆ ಬಿಡುವಂತೆ ಮಹಿಳೆಯರು ಒತ್ತಾಯಿಸಿದಾಗ, 10ರಿಂದ 50 ವರ್ಷದೊಳಗಿನ ಮಹಿಳಾ ಭಕ್ತರನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ಕಠಿಣ ಸೂಚನೆಗಳು ಹೊರಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆಗ ಮಹಿಳೆಯರು ವಿರೋಧ ವ್ಯಕ್ತಪಡಿಸಿ ಹಿಂತಿರುಗಿದ್ದಾರೆ.