ವಾರಣಾಸಿ(ಉತ್ತರ ಪ್ರದೇಶ) :ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ್ದಾರೆ.
ವಾರಣಾಸಿಯಲ್ಲಿ ಸಿಎಂ ಬಿಎಸ್ವೈ...
ಸಿಎಂ ಬಿಎಸ್ವೈ ಮತ್ತು ಪ್ರಧಾನಿ ಮೋದಿ ಶ್ರೀ ಜಗದ್ಗುರು ವಿಶ್ವರಾಧ್ಯ ಗುರುಕುಲದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸಿದರು. ಈ ಸಮಾರಂಭದಲ್ಲಿ ಭಾಗಿಯಾಗಲು ಕರ್ನಾಟಕ ಸಿಎಂ ಬಿಎಸ್ವೈ ಕೂಡಾ ತೆರಳಿದ್ದು, ಮೋದಿಯವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ದೀನ್ದಯಾಳ್ ಉಪಾಧ್ಯಾಯ ಪ್ರತಿಮೆ ಅನಾವರಣ...
ಇಂದು ವಾರಣಾಸಿಯಲ್ಲಿ ಮೋದಿ, ಖ್ಯಾತ ರಾಜಕಾರಣಿಯಾಗಿದ್ದ ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ 63 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದು ದೇಶದ ಅತಿ ಎತ್ತರದ 'ಪಂಚ ಲೋಹ'ದ ಪ್ರತಿಮೆಯಾಗಿದೆ. ಈ ಪ್ರತಿಮೆಯನ್ನು ಪೂರ್ಣಗೊಳಿಸುವ ಸಲುವಾಗಿ ಸುಮಾರು 200 ಕ್ಕೂ ಹೆಚ್ಚು ಕುಶಲಕರ್ಮಿಗಳು ಸುಮಾರು ಒಂದು ವರ್ಷ ಕೆಲಸ ಮಾಡಿದ್ದಾರೆ. ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರ ಸ್ಮಾರಕ ಕೇಂದ್ರದ ಉದ್ಘಾಟನಾ ಸಂದರ್ಭದಲ್ಲಿ ಪ್ರಧಾನಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ.
ದೀನ್ದಯಾಳ್ ಉಪಾಧ್ಯಾಯ ಪ್ರತಿಮೆ ದೀನ್ದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರದ ಉದ್ಘಾಟಿಸಿ ಮಾತನಾಡಿದ ಮೋದಿ, ಈ ಸ್ಮಾರಕವು ಮುಂದಿನ ಜನಾಂಗಕ್ಕೂ ಪ್ರೇರಣೆಯಾಗಲಿದೆ. ದೀನ್ ದಯಾಳ್ ಅವರ ಸಿದ್ಧಾಂತ ಮತ್ತು ಆಲೋಚನೆಗಳು ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತವೆ ಎಂದರು.
ಇಂದು ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಬಗ್ಗೆ ಮಾತನಾಡುತ್ತೇವೆ. ಪ್ರವಾಸೋದ್ಯಮ ಕೂಡಾ ಇದರ ಅವಿಭಾಜ್ಯ ಅಂಗ. ಪ್ರಕೃತಿಯನ್ನು ಹೊರತುಪಡಿಸಿ, ಪಾರಂಪರಿಕ ಪ್ರವಾಸೋದ್ಯಮವು ಗುರಿಯನ್ನು ಸಾಧಿಸುವಲ್ಲಿ ಪ್ರಬಲ ಪಾತ್ರವನ್ನು ಹೊಂದಿದೆ. ಅಲ್ಲದೆ, ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ವಾರಣಾಸಿಯ ಜೊತೆಗೆ ಇತರ ಪವಿತ್ರ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಕಾಶಿ ಮಹಾ ಕಾಲ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಐಆರ್‌ಸಿಟಿಸಿಯ ಕಾಶಿ ಮಹಾ ಕಾಲ್ ಎಕ್ಸ್‌ಪ್ರೆಸ್ ರೈಲಿಗೆ ವಿಡಿಯೋ ಲಿಂಕ್ ಮೂಲಕ ಚಾಲನೆ ನೀಡಿದರು. ಈ ರೈಲು ಮೂರು ಜ್ಯೋತಿರ್ಲಿಂಗ ಯಾತ್ರಾ ಕೇಂದ್ರಗಳಾದ ವಾರಣಾಸಿ, ಉಜ್ಜಯಿನಿ ಮತ್ತು ಓಂಕಾರೇಶ್ವರವನ್ನು ಸಂಪರ್ಕಿಸುತ್ತದೆ.
ಇನ್ನು ವಾರಣಾಸಿಯ ಚಂದೌಲಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ಹಲವು ವರ್ಷಗಳಿಂದ ಭಾರತವು 370ನೇ ವಿಧಿ ರದ್ದು ಮಾಡಲು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಕಾಯುತ್ತಿತ್ತು. ಈ ನಿರ್ಧಾರ ಭಾರತಕ್ಕೆ ಅನಿವಾರ್ಯವಾಗಿತ್ತು. ಹಲವು ಒತ್ತಡಗಳ ನಡುವೆಯೂ ನಮ್ಮ ಸರ್ಕಾರ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದರು.
30 ಕ್ಕೂ ಹೆಚ್ಚು ಯೋಜನೆಗಳಿಗೆ ಮೋದಿ ಚಾಲನೆ...
ಇನ್ನು ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. 430 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ 74 ಹಾಸಿಗೆಗಳ ಮನೋವೈದ್ಯಕೀಯ ಆಸ್ಪತ್ರೆ ಸೇರಿದಂತೆ 30 ಕ್ಕೂ ಹೆಚ್ಚು ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.