ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಹುನಿರೀಕ್ಷಿತ ಚಂದ್ರಯಾನ 2 ಯೋಜನೆ ನಿರ್ಣಾಯಕ ಘಟ್ಟ ತಲುಪಿದ್ದು, ಸೆಪ್ಟೆಂಬರ್ 7ರ ಮುಂಜಾನೆ ಶಶಿಯ ಮೇಲ್ಮೈ ಸ್ಪರ್ಶಿಸಲಿದೆ.
ಪ್ರಧಾನಿ ಮೋದಿ ಆದಿಯಾಗಿ 130 ಕೋಟಿ ಭಾರತೀಯರು ಈ ಐತಿಹಾಸಿಕ ಕ್ಷಣಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮೋದಿ ಮಾಡಿರುವ ಟ್ವೀಟ್ ತುಂಬಾ ಗಮನ ಸೆಳೆಯುತ್ತಿದೆ.
ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಕ್ಷಣವನ್ನು ಎಲ್ಲ ಭಾರತೀಯರು ವೀಕ್ಷಿಸಿಬೇಕು ಎಂದಿರುವ ಮೋದಿ, ನೀವು ವೀಕ್ಷಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ, ಉತ್ತಮವಾದ ಆಯ್ದ ಫೋಟೋಗಳನ್ನು ನಾನು ರಿಟ್ವೀಟ್ ಮಾಡಲಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
130 ಕೋಟಿ ಭಾರತೀಯರು ಕಾಯುತ್ತಿದ್ದ ಐತಿಹಾಸಿಕ ಕ್ಷಣ ಬಂದಿದೆ: ಪ್ರಧಾನಿ ಮೋದಿ
ಸೆಪ್ಟೆಂಬರ್ 7ರ ಮುಂಜಾನೆ 1.30ರಿಂದ 2ರ ಅವಧಿಯಲ್ಲಿ ನಡೆಯುವ ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಿಸಲು ಇಸ್ರೋ ಪ್ರಧಾನಿ ಮೋದಿಗೆ ಆಹ್ವಾನ ನೀಡಿತ್ತು. ಈ ಆಹ್ವಾನವನ್ನು ಒಪ್ಪಿಕೊಂಡಿರುವ ಮೋದಿ ಇಂದು ರಾತ್ರಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ. ಇದಕ್ಕೂ ಮುನ್ನ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಚಂದ್ರಯಾನ 2 ಬಗ್ಗೆ ಬರೆದುಕೊಂಡಿದ್ದಾರೆ.