ನವದೆಹಲಿ: ಪ್ರಧಾನಿ ಮೋದಿಗೆ ಇಂದು 69ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನವನ್ನು ಆಚರಿಸಲು ಮೋದಿ ನೇರವಾಗಿ ಅಮ್ಮನ ಬಳಿ ತೆರಳಿದ್ದು ಇಂದು ತವರು ರಾಜ್ಯದಲ್ಲಿ ದಿನ ಕಳೆಯಲಿದ್ದಾರೆ.
ಮೋದಿ ಹುಟ್ಟುಹಬ್ಬದ ವಿಚಾರ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಭಾರತದ ಟ್ರೆಂಡ್ನಲ್ಲಿ ಮೋದಿ ಹುಟ್ಟುಹಬ್ಬದ ಮೊದಲ ನಾಲ್ಕು ಸ್ಥಾನ ಪಡೆದಿದ್ದು, ಪ್ರಧಾನಿ ಅಭಿಮಾನಿಗಳು, ಹಿಂಬಾಲಕರು ಹಾಗೂ ಪಕ್ಷದ ಮುಖಂಡರಿಂದ ಸೇರಿ ಕಾರ್ಯಕರ್ತರವರೆಗೂ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.
ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ನಲ್ಲಿ ಬರೋಬ್ಬರಿ 69 ಅಡಿ ಉದ್ದದ ಕೇಕ್ ಕಟ್ ಮಾಡಿ ಸಂಭ್ರಮಿಸಲಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಸದ ಮನೋಜ್ ತಿವಾರಿ ಮುಂದಾಳತ್ವದಲ್ಲಿ ಮೋದಿ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ಮೋದಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಅಭಿಮಾನಿಯೋರ್ವ ಸಂಕಟ ಮೋಚನ ದೇವಸ್ಥಾನದ ಹನುಮಂತ ದೇವರಿಗೆ 1.25ಕೆ.ಜಿ ತೂಕದ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ. ಮೋದಿ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದರೆ ದೇವರಿಗೆ ಈ ಕಿರೀಟ ಅರ್ಪಿಸುವುದಾಗಿ ಹರಕೆ ಹೊತ್ತಿದ್ದಾಗಿ ಮೋದಿ ಅಭಿಮಾನಿ ಅರವಿಂದ್ ಸಿಂಗ್ ಹೇಳಿದ್ದಾರೆ.