ಕರ್ನಾಟಕ

karnataka

ETV Bharat / bharat

ಬ್ರಿಕ್ಸ್ ಶೃಂಗಸಭೆ: ಬ್ರೆಜಿಲ್​ನಲ್ಲಿ ಪ್ರಧಾನಿ ಮೋದಿ, ಕಾಶ್ಮೀರದ್ದೇ ಧ್ಯಾನ

11ನೇ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಶೃಂಗಸಭೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ.

ಬ್ರೆಜಿಲ್​ನಲ್ಲಿ ಪ್ರಧಾನಿ ಮೋದಿ

By

Published : Nov 14, 2019, 12:58 PM IST

ಹನ್ನೊಂದನೇ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ) ಶೃಂಗಸಭೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದದಿಂದ ಭಾರತ ಹಿಂದೆ ಸರಿದ ಕೆಲವೇ ದಿನಗಳ ಬಳಿಕ ಈ ಭೇಟಿ ಏರ್ಪಟ್ಟಿದೆ.

ಮಾಮಲ್ಲಾಪುರದಲ್ಲಿ ನಡೆದ 2ನೇ ಅನೌಪಚಾರಿಕ ಶೃಂಗಸಭೆಯ ಒಂದು ತಿಂಗಳೊಳಗೆ ಈ ಇಬ್ಬರು ಉನ್ನತ ನಾಯಕರು ಮಾತುಕತೆಗೆ ಮುಂದಾಗಿದ್ದಾರೆ. ಆರ್‌ಸಿಇಪಿಯಿಂದಾಗಿ ತೃತೀಯ ದೇಶಗಳ ಮೂಲಕ ಭಾರತಕ್ಕೆ ಬರುವ ಚೀನಾ ಸರಕುಗಳು ದೇಶವನ್ನು ಕಸದ ತಿಪ್ಪೆಯಾಗಿ ಮಾಡುತ್ತವೆ ಎಂದು ಭಾರತದ ದೇಸಿ ಉದ್ಯಮ ಬಲವಾಗಿ ವಿರೋಧಿಸಿತ್ತು.

ಚೀನಾಕ್ಕೆ ಸಂಬಂಧಿಸಿದಂತೆ ಭಾರತ 5,000 ಕೋಟಿ ರೂಪಾಯಿಯಷ್ಟು ವ್ಯಾಪಾರ ಕೊರತೆ ಎದುರಿಸುತ್ತಿದೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಚೀನಾದ ಉಪ ಪ್ರಧಾನಿ ಹು ಚುನ್ ಹುವಾ ನಡುವೆ ತಮಿಳುನಾಡಿನಲ್ಲಿ ನಡೆದ ಸಚಿವ ಮಟ್ಟದ ಸಭೆ ವೇಳೆ ವ್ಯಾಪಾರ, ಹೂಡಿಕೆ ಹಾಗೂ ವ್ಯಾಪಾರ ಕೊರತೆ ನೀಗಿಸುವ ಮಾರ್ಗಗಳನ್ನು ಚರ್ಚಿಸಲು ಶೀಘ್ರದಲ್ಲೇ ಭೇಟಿಯಾಗಲು ನಿರ್ಧರಿಸಲಾಗಿತ್ತು.

ಬ್ರೆಸಿಲಿಯಾದಲ್ಲಿ ನಡೆಯುವ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಕಾಶ್ಮೀರ ಕುರಿತು ಚರ್ಚಿಸುವ ಸಾಧ್ಯತೆಗಳಿವೆ. ತಮಿಳುನಾಡಿನಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗಸಭೆ ಸಮಯದಲ್ಲಿ ಕಾಶ್ಮೀರ ಕುರಿತು ಮಾತುಕತೆ ನಡೆದಿರಲಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನಕ್ಕೆ ಚೀನಾ ಬೆಂಬಲವಾಗಿ ನಿಂತಿರುವುದು ಮಾತುಕತೆಗೆ ಇರುವ ದೊಡ್ಡ ಅಡ್ಡಿ.

ಈ ಮಧ್ಯೆ ಗಾಯಕ್ಕೆ ಉಪ್ಪು ಸುರಿದಂತೆ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಬದಲಿಸಿದ ಬಳಿಕ ಅಮೆರಿಕದ ಸಂಸತ್ತು ಇದೇ ನವೆಂಬರ್ 14ರಂದು ಕಾಶ್ಮೀರ ಕುರಿತಂತೆ ಚರ್ಚೆ ನಡೆಸಲಿದೆ. ಲ್ಯಾಂಟೋಸ್ ನೇತೃತ್ವದ ಮಾನವ ಹಕ್ಕುಗಳ ಆಯೋಗ ನವೆಂಬರ್ 14ರಂದು ಸ್ಥಳೀಯ ಕಾಲಮಾನ ಮಧ್ಯಾಹ್ನ ಎರಡು ಗಂಟೆಗೆ ಐತಿಹಾಸಿಕ ಮತ್ತು ರಾಷ್ಟ್ರೀಯ ಸನ್ನಿವೇಶದಲ್ಲಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿ ಕುರಿತು ವಿಚಾರಣೆ ಆರಂಭಿಸಲಿದೆ. ಆದ್ರೆ, ಲ್ಯಾಂಟೋಸ್ ಮರಣದ ನಂತರ ಅವರ ಕುಟುಂಬ ರಚಿಸಿದ ಸಮಿತಿಯನ್ನು ಡೆಮೋಕ್ರಟಿಕ್ ಪಕ್ಷದ ಜಿಮ್ ಮೆಕ್ಗೊವರ್ನ್ ಮತ್ತು ರಿಪಬ್ಲಿಕನ್ ಪಕ್ಷದ ಕ್ರಿಸ್ ಸ್ಮಿತ್ ಮುನ್ನಡೆಸುತ್ತಿದ್ದಾರೆ. ಈ ಹಿಂದೆ 2014 ಮತ್ತು 2015 ರಲ್ಲಿ ಆಯೋಗ ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ಕುರಿತಂತೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ಸಂಗ್ರಹಿಸಿತ್ತು.

‘ಆಗಸ್ಟ್‌ನಲ್ಲಿ ಭಾರತ ಸರ್ಕಾರ ಮುಸ್ಲಿಮರು ಬಹುಸಂಖ್ಯೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕಾನೂನು ಸ್ಥಿತಿ ಬದಲಿಸಲು ನಿರ್ಧರಿಸಿದ್ದು ಇದು 2019ರ ಅಕ್ಟೋಬರ್ 31ರಿಂದ ಕಾರ್ಯರೂಪಕ್ಕೆ ಬರಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು, ನೂರಾರು ರಾಜಕಾರಣಿಗಳು, ವಕೀಲರು, ಪತ್ರಕರ್ತರು ಹಾಗೂ ಇತರೆ ನಾಗರಿಕ ಸಮಾಜದ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮದ ಹೆಸರಿನಲ್ಲಿ ಬಂಧಿಸಿರುವುದು, ಬಲವಂತದ ಕಣ್ಮರೆಯಂತಹ ಭೀತಿ ಸೃಷ್ಟಿಸಿರುವುದು, ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ, ಪ್ರದೇಶದಲ್ಲಿ ಸೇನಾ ಜಮಾವಣೆಯ ಹೆಚ್ಚಳ, ಕೇಂದ್ರ ಸರ್ಕಾರದ ಕ್ರಮಗಳಿಂದ ಉಂಟಾಗುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು, ಅಂತರ್ಜಾಲ ಮತ್ತು ಫೋನ್ ಬಳಕೆಯ ಮೇಲೆ ಹೇರಲಾದ ನಿರಂತರ ನಿರ್ಬಂಧ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯ ಸತತ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿಶ್ವದ ಗಮನ ಸೆಳೆದಿದೆ.

ಇದರ ಜೊತೆಗೆ ಬಂಡುಕೋರರು ಕಾಶ್ಮೀರದ ಹೊರಗಿನ ವಲಸಿಗರನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿದ್ದಾರೆ ಮತ್ತು ಬಂದ್ ಪ್ರತಿಭಟನೆಗೆ ಬೆಂಬಲ ನೀಡುವಂತೆ ಸೂಚಿಸಿ ವ್ಯಾಪಾರ-ವ್ಯವಹಾರಗಳಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎನ್ನುತ್ತದೆ ಅಧಿಕೃತ ಪ್ರಕಟಣೆ. “ಪ್ರಾದೇಶಿಕ ಚರಿತ್ರೆ ಮತ್ತು ಭಾರತ-ಪಾಕಿಸ್ತಾನ ಎರಡೂ ಕಡೆ ನಡೆದ ಹಕ್ಕುಗಳ ಉಲ್ಲಂಘನೆ ಆಧರಿಸಿ ವೀಕ್ಷಕರು ಜಮ್ಮು ಕಾಶ್ಮೀರದ ಮಾನವ ಹಕ್ಕು ಉಲ್ಲಂಘನೆ ಸ್ಥಿತಿಗತಿಯನ್ನು ಪರಾಮರ್ಶಿಸಲಿದ್ದಾರೆ ಮತ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಸತ್ತಿಗೆ ಶಿಫಾರಸುಗಳನ್ನು ಕಳಿಸಲಿದ್ದಾರೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಅಲ್ಲಿನ ಸಂಸದರು ಜಮ್ಮು ಕಾಶ್ಮೀರದಲ್ಲಿ ಉಂಟಾದ ಮಾನವೀಯ ಬಿಕ್ಕಟ್ಟಿನ ವಿಚಾರವಾಗಿ ಅಮೆರಿಕ ಸಕ್ರಿಯವಾಗಿ ಪಾತ್ರವಹಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಅಮೆರಿಕ ಸದನದ ವಿದೇಶಾಂಗ ವ್ಯವಹಾರ ಉಪ ಸಮಿತಿ ವಿಚಾರಣೆ ನಡೆಸಿದ ಮೂರು ವಾರಗಳ ಬಳಿಕ ಸಂಸದೀಯ ವಿಚಾರಣೆ ನಡೆಯಲಿದೆ.

ಮೋದಿ- ಪುಟಿನ್ ಭೇಟಿ: ಬ್ರಿಕ್ಸ್ ನಲ್ಲಿ ಭಯೋತ್ಪಾದನೆ ಕುರಿತ ಚರ್ಚೆ

ಚೀನಾದ ಷಿ ಅವರನ್ನು ಭೇಟಿಯಾಗಲಿರುವ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಾಯಾಸ್ ಬೋಲ್ಸನಾರೊ ಅವರೊಂದಿಗೆ ಕೂಡ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸಿರಿಯಾ ಪರಿಸ್ಥಿತಿ ಬಗ್ಗೆ ನ್ಯಾಟೋ ಮಿತ್ರರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನತೆಯ ಮಧ್ಯೆ ಟರ್ಕಿ ಅಧ್ಯಕ್ಷ ಎರ್ಡೊಗಾನ್ ಅವರು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ಮೋದಿ ಮತ್ತು ಪುಟಿನ್ ಅವರ ಸಭೆ ನಡೆಯಲಿದೆ. ಟರ್ಕಿ ಎಸ್- 400 ರಷ್ಯನ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ್ದು ಭಾರತ ಕೂಡ ಟರ್ಕಿಯಿಂದ ಅದೇ ಎಸ್-400 ವ್ಯವಸ್ಥೆಯನ್ನು ಕೊಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಟರ್ಕಿ ಮೇಲೆ ಕಾಟ್ಸಾ ಕಾಯ್ದೆ (ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ದೇಶಗಳ ಮೇಲೆ ಆರ್ಥಿಕ ನಿರ್ಬಂಧ ಹೇರಲು ಅಮೆರಿಕ ರೂಪಿಸಿಕೊಂಡ ಕಾಯ್ದೆ) ಬೀರುವ ಪರಿಣಾಮಗಳನ್ನು ಅದು ಹತ್ತಿರದಿಂದ ಗಮನಿಸುತ್ತಿದೆ.

ಇದು 2014ರಿಂದ ಪ್ರಧಾನಿ ಮೋದಿ ಭಾಗವಹಿಸುತ್ತಿರುವ ಆರನೇ ಬ್ರಿಕ್ಸ್ ಶೃಂಗಸಭೆ. ಈ ವರ್ಷದ ಮುಖ್ಯ ಚರ್ಚೆಯ ವಿಷಯ ‘ಹೊಸ ಭವಿಷ್ಯಕ್ಕಾಗಿ ಆರ್ಥಿಕ ಬೆಳವಣಿಗೆ.’ ಪ್ರಪಂಚದ ಶೇ 42ರಷ್ಟು ಜನಸಂಖ್ಯೆಯನ್ನು, ಶೇ 23ರಷ್ಟು ಜಾಗತಿಕ ಜಿಡಿಪಿಯನ್ನು ಹಾಗೂ ಶೇ 17ರಷ್ಟು ವಿಶ್ವ ವ್ಯಾಪಾರವನ್ನು ಒಳಗೊಳ್ಳುವ ಐದು ಪ್ರಮುಖ ಉದಯೋನ್ಮುಖ ಆರ್ಥಿಕತೆಗಳನ್ನು ಬ್ರಿಕ್ಸ್ ರೂಪಿಸಿದೆ. ನವೆಂಬರ್ 14 ರ ಬೆಳಿಗ್ಗೆ ಫೋಟೋ ಸೆಷನ್ ಬಳಿಕ ನಾಯಕರು ಬ್ರಿಕ್ಸ್ ಗೋಪ್ಯ ಅಧಿವೇಶನಕ್ಕೆ ಹಾಜರಾಗುತ್ತಾರೆ. ‘ಸಮಕಾಲೀನ ಜಗತ್ತಿನಲ್ಲಿ ರಾಷ್ಟ್ರೀಯ ಸಾರ್ವಭೌಮತ್ವವನ್ನು ಚಲಾಯಿಸುವ ಸವಾಲುಗಳು ಮತ್ತು ಅವಕಾಶಗಳ’ ಮೇಲೆ ಅಧಿವೇಶನ ಗಮನ ಕೇಂದ್ರೀಕರಿಸುವ ಸಾಧ್ಯತೆಯಿದೆ’ ಎಂದು ಭಾರತೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಬ್ರಿಕ್ಸ್ ಸಮಾಜಗಳ ಆರ್ಥಿಕ ಅಭಿವೃದ್ಧಿಗಾಗಿ ಆ ದೇಶಗಳ ಪರಸ್ಪರ ಸಹಕಾರ ಕುರಿತ ಸಮಗ್ರ ಅಧಿವೇಶನ ಮತ್ತು ಬ್ರಿಕ್ಸ್ ವಾಣಿಜ್ಯ ಮಂಡಳಿಯ ಸಭೆ ನಡೆಯಲಿದೆ. ಶೃಂಗಸಭೆಯ ಸಮರೋಪದ ಭಾಗವಾಗಿ ನಾಯಕರು ಜಂಟಿ ಘೋಷಣೆ ಹೊರಡಿಸಲಿದ್ದಾರೆ.

‘ಭಯೋತ್ಪಾದನೆ ವಿರುದ್ಧ ಬಲವಾದ ನಿಲುವು ತೆಗೆದುಕೊಳ್ಳುವುದಷ್ಟೇ ಅಲ್ಲ, ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಅಂಶಗಳ ಬಗ್ಗೆ ಕೇಂದ್ರೀಕೃತ ಸಮಾಲೋಚನೆ ನಡೆಸಲು ಕಾರ್ಯೋನ್ಮುಖರಾಗಲಿದ್ದೇವೆ. ಈ ವರ್ಷ ಭಯೋತ್ಪಾದನೆ ನಿಗ್ರಹ ಜಂಟಿ ಕ್ರಿಯಾ ಸಂಟನೆಯು ಐದು ಉಪ ಕ್ರಿಯಾ ಸಂಘಟನೆಗಳನ್ನು ರಚಿಸಲು ನಿರ್ಧರಿಸಿದೆ. ಭಯೋತ್ಪಾದನೆಗೆ ಆರ್ಥಿಕ ಸಹಕಾರ, ಉಗ್ರಗಾಮಿ ಚಟುವಟಿಕೆಗಳಿಗಾಗಿ ಅಂತರ್ಜಾಲದ ಬಳಕೆ, ತೀವ್ರಗಾಮಿತನವನ್ನು ಎದುರಿಸುವುದು, ವಿದೇಶಿ ಉಗ್ರಗಾಮಿಗಳ ಉಪಟಳ ಹಾಗೂ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಈ ಸಂಘಟನೆಗಳು ಕಾರ್ಯ ನಿರ್ವಹಿಸಲಿವೆ. ಭಾರತ, ಉಗ್ರಗಾಮಿ ಚಟುವಟಿಕೆಗಳಿಗಾಗಿ ಅಂತರ್ಜಾಲದ ಬಳಕೆ ನಿಗ್ರಹಿಸುವ ಉಪ ಸಂಘಟನೆಯ ನೇತೃತ್ವವಹಿಸಿಕೊಳ್ಳಲಿದೆ’ ಎಂದು ಭೇಟಿಯ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ (ಆರ್ಥಿಕ ಸಂಬಂಧಗಳು) ಕಾರ್ಯದರ್ಶಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.

ಕಳೆದ ತಿಂಗಳು ನಡೆದ ಬ್ರಿಕ್ಸ್ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಸಭೆಯಲ್ಲಿ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾರತದಲ್ಲಿ ಡಿಜಿಟಲ್ ಫೊರೆನ್ಸಿಕ್ಸ್ ಕುರಿತು ಕಾರ್ಯಾಗಾರ ಆಯೋಜಿಸಲು ಬ್ರಿಕ್ಸ್ ದೇಶಗಳನ್ನು ಕೋರಿದ್ದರು.

- ಸ್ಮಿತಾ ಶರ್ಮಾ, ನವದೆಹಲಿ

ABOUT THE AUTHOR

...view details