ಭುವನೇಶ್ವರ: ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಒಡಿಶಾದ ಪುರಿಯಲ್ಲಿ ಭಗವಾನ್ ಜಗನ್ನಾಥರ ರಥಯಾತ್ರೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಆದ್ರೆ ಪುರಿ ಜಗನ್ನಾಥ ರಥಯಾತ್ರೆ ನಡೆಸುವುದಕ್ಕೆ ಅನುಮತಿ ನೀಡಬೇಕೆಂದು ಈಗ ಅರ್ಜಿದಾರರೊಬ್ಬರು ಮತ್ತೆ ಕೋರ್ಟ್ ಕದ ತಟ್ಟಿದ್ದಾರೆ.
ಜೂನ್ 23 ರಂದು ಪುರಿಯಲ್ಲಿ ರಥಯಾತ್ರೆ ನಡೆಯಬೇಕಿತ್ತು. ಈ ಕಾರ್ಯಕ್ರಮವು ಸುಮಾರು 10 ದಿನಗಳವರೆಗೆ ನಡೆಯಲಿದ್ದು, ಇದರಲ್ಲಿ 10 ರಿಂದ 12 ಲಕ್ಷ ಜನರು ಸೇರುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸುಪ್ರೀಂಕೋರ್ಟ್ ಈ ರಥಯಾತ್ರೆಗೆ ನಿಷೇಧ ಹೇರಿತ್ತು.
ನಾವು ಇದಕ್ಕೆ ಅನುಮತಿ ನೀಡಿದರೆ, ಭಗವಾನ್ ಜಗನ್ನಾಥರು ನಮ್ಮನ್ನು ಕ್ಷಮಿಸುವುದಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ. ಜನರ ಆರೋಗ್ಯಕ್ಕಾಗಿ ಈ ಆದೇಶ ಅಗತ್ಯ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಹೇಳಿದ್ದರು.
ಭಗವಾನ್ ಜಗನ್ನಾಥ ರಥಯಾತ್ರೆಗೆ ಸುಪ್ರೀಂಕೋರ್ಟ್ ಕೆಲವು ಬದಲಾವಣೆ ಮಾಡಿ ಅನುಮತಿ ನೀಡಬೇಕು ಎಂದು ಶುಕ್ರವಾರ ಅರ್ಜಿದಾರ ಅಫ್ತಾಬ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿದಾರರಾದ ಅಫ್ತಾಬ್ ಹುಸೇನ್ ಪರ ವಕೀಲ ಪ್ರಣಯ್ ಮೊಹಾಪಾತ್ರ ಮಾತನಾಡಿ, ಭಕ್ತರು ಭಾಗವಹಿಸದಂತೆ ಪುರಿಯಲ್ಲಿ ಮಾತ್ರ ರಥಯಾತ್ರೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಲಾಗಿದೆ. ಈ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ ಎಂದರು.
ಗೋವರ್ದನ ಪೀಠದ ಗುರು ಪುರಿ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಾತನಾಡಿ, ಸುಪ್ರೀಂ ಕೋರ್ಟ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಸೇವಕರಿಗೆ ಜಾತ್ರೆಯನ್ನು ಆಚರಿಸಲು ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
ಭಕ್ತರು ಭಾಗಿಯಾಗದಂತೆ ಮತ್ತು ಸೀಮಿತ ಸಂಖ್ಯೆಯ ಸೇವಕರೊಂದಿಗೆ ಪುರಿಯಲ್ಲಿ ರಥಯಾತ್ರೆ ನಡೆಸಲು ಸುಪ್ರೀಂಕೋರ್ಟ್ ಅನುಮತಿಸಬಹುದು. ಈ ರಥಯಾತ್ರೆ ಉತ್ಸವಕ್ಕೆ ಅನುಮತಿ ದೊರೆತಲ್ಲಿ ಭಕ್ತರು ಮಾಧ್ಯಮಗಳಲ್ಲಿ ರಥಯಾತ್ರೆ ನೋಡಬಹುದಾಗಿದೆ ಎಂದು ಪುರಿ ಶಂಕರಾಚಾರ್ಯರು ಹೇಳಿದ್ದಾರೆ.