ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿವಿಧ ಚಟುವಟಿಕೆಗಳಿಗೆ ಒತ್ತು ನೀಡಿರುವ ಕೊರೊನಾ ವೈರಸ್, ಬೇರೆ ವೇಷದಲ್ಲಿ ಭಾರತಕ್ಕೆ ವರವಾಗಿ ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ವರವೊಂದು ಸಾಂಕ್ರಾಮಿಕದ ವೇಷದಲ್ಲಿ ಭಾರತಕ್ಕೆ ಬಂದಿದೆ ಎಂದಿದ್ದಾರೆ.
ಭಾರತದಲ್ಲಿ ಸಾಕಷ್ಟು ಚಟುವಟಿಕೆಗಳು ಪ್ರಾರಂಭವಾಗಿವೆ. ನಾವು ಪಿಪಿಇಗಳನ್ನು ತಯಾರಿಸುತ್ತಿದ್ದೇವೆ. ದೇಶದಲ್ಲಿ ನೂರಕ್ಕೂ ಹೆಚ್ಚು ಪಿಪಿಇ ತಯಾರಕರನ್ನು ಹೊಂದಿದಿದ್ದು, ಪ್ರತಿದಿನ 1 ಲಕ್ಷದಿಂದ 1.5 ಲಕ್ಷ ಪಿಪಿಇಗಳನ್ನು ತಯಾರಿಸುತ್ತಿದ್ದೇವೆ ಎಂದಿದ್ದಾರೆ.
ಹೊಸ ಔಷಧದ ಆವಿಷ್ಕಾರ ಅಥವಾ ಪ್ರಸ್ತುತ ಬಳಸುತ್ತಿರುವ ಔಷಧಿಗಳ ಯಶಸ್ವಿ ಪ್ರಯೋಗ. ಲಸಿಕೆ ಅಥವಾ ಸ್ಥಳೀಯ ಪರೀಕ್ಷಾ ಕಿಟ್‌ಗಳ ಆವಿಷ್ಕಾರದ ಬಗ್ಗೆ ಇಡೀ ದೇಶವೇ ಭಾರತೀಯ ವಿಜ್ಞಾನಿಗಳ ಕೊಡುಗೆಗಾಗಿ ಬಹಳ ಕುತೂಹಲದಿಂದ ಕಾಯುತ್ತಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.