ಅಹಮದಾಬಾದ್ (ಗುಜರಾತ್): ನಿಸರ್ಗ ಚಂಡಮಾರುತದ ಅಬ್ಬರದಿಂದಾಗಿ ದಕ್ಷಿಣ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 50,000 ಜನರು ಮತ್ತು ಅಲ್ಲೇ ಸಮೀಪದಲ್ಲಿರುವ ಕೇಂದ್ರಾಡಳಿತ ಪ್ರದೇಶವಾದ ದಮನ್‌ನಿಂದ ಸುಮಾರು 4,000 ನಿವಾಸಿಗಳನ್ನು ಮುಂಜಾಗ್ರತ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಪ್ರದೇಶದಲ್ಲಿ ತನ್ನ ಅಬ್ಬರದಾಟ ಮುಂದುವರಿಸಿರುವ ನಿಸರ್ಗ ಚಂಡಮಾರುತ, ಗುಜರಾತ್‌ನ ದಕ್ಷಿಣ ಭಾಗ ಹಾಗೂ ದಮನ್ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಗುಜರಾತ್‌ನ ಕಡಲ ತೀರಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಜನರಿಗೆ ತಮ್ಮ ಮನೆಯೊಳಗೆ ಉಳಿಯುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಗುಜರಾತ್ ಭಾಗದ ಕರಾವಳಿಯ ಸಮೀಪ ವಾಸಿಸುತ್ತಿರುವ 50,000 ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಹೆಚ್ಚಿನ ಜನರನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ತಿಳಿಸಿದ್ದಾರೆ.
ನಿಸರ್ಗ ಚಂಡಮಾರುತವು ಗುಜರಾತಿನ ಸೂರತ್ ಮತ್ತು ಭರುಚ್ ಭಾಗಗಳ ನಂತರ ವಲ್ಸಾದ್ ಮತ್ತು ನವಸಾರಿ ಜಿಲ್ಲೆಗಳ ಮೇಲೆ ಗರಿಷ್ಠ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಚಂಡಮಾರುತ ದಕ್ಷಿಣ ಗುಜರಾತ್ ಮತ್ತು ಉತ್ತರ ಮಹಾರಾಷ್ಟ್ರದ ನಡುವೆ ಅಪ್ಪಳಿಸಿದಾಗ ವಲ್ಸಾದ್ ಮತ್ತು ನವಸಾರಿ ಜಿಲ್ಲೆಯಲ್ಲಿ ಇದರ ಗಾಳಿಯ ವೇಗ 100 ರಿಂದ 110 ಕಿ.ಮೀ ವೇಗದಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ.