ಕೊಯಿಮತ್ತೂರು:ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ 59 ವರ್ಷದ ವ್ಯಕ್ತಿಯನ್ನು ಪೆರೂರು ಮಹಿಳಾ ಪೊಲೀಸರು ಭಾನುವಾರ ಬಂಧಿಸಿರುವ ಘಟನೆ ಜಿಲ್ಲೆಯ ಸೂಲೂರು ಬಳಿ ನಡೆದಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: 59 ವಯಸ್ಸಿನ ವ್ಯಕ್ತಿ ಅಂದರ್ - ಕೊಯಿಮತ್ತೂರು ಕ್ರೈಂ
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ 59 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ತಮಿಳುನಾಡಿನ ಕೊಯಿಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಬಂಧಿತ ವ್ಯಕ್ತಿ ಸೂಲೂರು ಗ್ರಾಮದವನಾಗಿದ್ದು, ಈತ 7 ವರ್ಷಗಳ ಕಾಲ ಮಕ್ಕಳಿಗಾಗಿ ಆಶ್ರಯ ಮನೆಯನ್ನು ನಡೆಸುತ್ತಿದ್ದ. ಆದರೆ 4 ವರ್ಷಗಳ ಹಿಂದೆ ಅದನ್ನು ಬಂದ್ ಮಾಡಿದ್ದು, ಅಲ್ಲಿದ್ದ ಮಕ್ಕಳನ್ನು ಅವರವರ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದ. ಆದರೆ ಓರ್ವ ಬಾಲಕಿಯನ್ನು ಮಾತ್ರ ಕಳುಹಿಸಿಕೊಡದೆ, ತನ್ನ ಮನೆಯಲ್ಲೇ ಉಳಿಸಿಕೊಂಡು ಮನೆಗೆಲಸ ಮಾಡಿಸುತ್ತಿದ್ದನಂತೆ.
ಆದರೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಬಾಲಕಿ ತನ್ನ ಸಂಬಂಧಿಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಘಟನೆಯನ್ನು ಬಹಿರಂಗಪಡಿಸಿದ್ದಾಳೆ. ಆಕೆಯ ಸಂಬಂಧಿಗಳು ಮಕ್ಕಳ ರಕ್ಷಣಾ ಅಧಿಕಾರಿಗಳು ಮತ್ತು ಸೂಲೂರ್ ಪೊಲೀಸರನ್ನು ಸಂಪರ್ಕಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.