ನವದೆಹಲಿ: ನಿಮ್ಮ ಹಕ್ಕು, ಅಸ್ಮಿತೆ ಹಾಗೂ ಸುಂದರ ಸಂಸ್ಕೃತಿಯನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅಸ್ಸೋಂ ಜನತೆಗೆ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
ನಿಮ್ಮ ಹಕ್ಕು, ಅಸ್ಮಿತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ: ಅಸ್ಸೋಂ ಜನತೆಗೆ ಮೋದಿ ಭರವಸೆ - ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಮೋದಿ ಪ್ರತಿಕ್ರಿಯೆ
ಪೌರತ್ವ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ದಿನದಿಂದ ಅಸ್ಸೋಂನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ಮೂಲಕ ಅಲ್ಲಿನ ಜನತೆಗೆ ಭರವಸೆ ನೀಡಿರುವ ಪ್ರಧಾನಿ ನಿಮ್ಮ ಹಕ್ಕು, ಅಸ್ಮಿತೆ ಹಾಗೂ ಸುಂದರ ಸಂಸ್ಕೃತಿಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಪೌರತ್ವ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡ ದಿನದಿಂದ ಅಸ್ಸೋಂನಲ್ಲಿ ಪ್ರತಿಭಟನೆ ಜೋರಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಅಸ್ಸೋಂ ಜನತೆ ತೀವ್ರ ಸ್ವರೂಪದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ನಿನ್ನೆ ಸಂಸತ್ತಿನ ಮೇಲ್ಮನೆಯಲ್ಲೂ ಮಸೂದೆಗೆ ಒಪ್ಪಿಗೆ ಸಿಕ್ಕಿದೆ. ಇದು ಆ ರಾಜ್ಯದ ಜನರನ್ನು ಮತ್ತಷ್ಟು ಕೆರಳಿಸಿತ್ತು.
ಹೀಗಾಗಿ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ, ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿರುವ ವಿಚಾರವಾಗಿ ಅಸ್ಸೋಂನ ಸಹೋದರ-ಸಹೋದರಿಯರು ಭಯಪಡಬೇಕಾದ ಅಗತ್ಯವಿಲ್ಲ. ನಿಮ್ಮ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ನಿಮ್ಮ ಅಸ್ಮಿತೆ ಹಾಗೂ ಸಂಸ್ಕೃತಿ ಇನ್ನಷ್ಟು ಎತ್ತರಕ್ಕೆ ಸಾಗುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.