ನವದೆಹಲಿ:ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣಗಳಲ್ಲಿ ಶವದ ಸರ್ಜರಿ ಮಾಡುವುದರಿಂದ ಹೊರಬರುವ ದೇಹದ ದ್ರವಗಳಿಂದ ವೈದ್ಯರು ಮತ್ತು ಶವಾಗಾರದ ಸಿಬ್ಬಂದಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಶವ ಪರೀಕ್ಷೆಯಲ್ಲಿ ದೇಹವನ್ನು ಕೊಯ್ಯಬಾರದು ಎಂದು ಕರಡು ದಾಖಲೆಯಲ್ಲಿ ಉಲ್ಲೇಖಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನೆಯ ಕೌನ್ಸಿಲ್ (ಐಸಿಎಂಆರ್) ಬಿಡುಗಡೆ ಮಾಡಿದ ‘ಭಾರತದಲ್ಲಿ ಕೋವಿಡ್ 19 ರೋಗಿಗಳ ಮರಣ ಮೆಡಿಕೋ ಲೀಗಲ್ ಅಟಾಪ್ಸಿಗೆ ಪ್ರಮಾಣಿತ ಮಾರ್ಗಸೂಚಿಗಳು’ ಎಂಬ ಅಂತಿಮ ಕರಡು ವರದಿಯ ಪ್ರಕಾರ, ಕೊರೊನಾ ವೈರಸ್‌ನಿಂದಾಗಿ ಆಸ್ಪತ್ರೆಯಲ್ಲಿ ಮತ್ತು ವೈದ್ಯಕೀಯ ಆರೈಕೆಯಲ್ಲಿ ಸಾವನ್ನಪ್ಪಿದರೆ ಅದನ್ನು ಎಂಎಲ್‌ಸಿ ಹೊರತಾದ ಪ್ರಕರಣವಾಗಿರುತ್ತದೆ ಮತ್ತು ಇದಕ್ಕೆ ಪೋಸ್ಟ್‌ಮಾರ್ಟಮ್ ಮಾಡಬೇಕಿಲ್ಲ ಮತ್ತು ಈ ಪ್ರಕರಣದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮರಣ ಪ್ರಮಾಣಪತ್ರವನ್ನು ನೀಡಬಹುದಾಗಿದೆ. ಕೋವಿಡ್ 19ರಿಂದಾಗಿ ಸಾವನ್ನಪ್ಪಿರುವ ಶಂಕೆಯಲ್ಲಿ ಆಸ್ಪತ್ರೆಗೆ ಮೃತದೇಹವನ್ನು ತಂದಾಗ ಅದನ್ನು ಎಂಎಲ್‌ಸಿ ಎಂದು ತುರ್ತು ವೈದ್ಯರು ಗುರುತಿಸಬಹುದು ಮತ್ತು ಅದನ್ನು ಶವಾಗಾರಕ್ಕೆ ಕಳುಹಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಆಗ ಸಾವಿನ ಕಾರಣವನ್ನು ಸ್ಪಷ್ಟಪಡಿಸಿಕೊಳ್ಳಲು, ಪೋಸ್ಟ್‌ಮಾರ್ಟಮ್ ಮಾಡಬಹುದಾಗಿದೆ. “ಇಂತಹ ಪ್ರಕರಣಗಳ ಮರಣೋತ್ತರ ಪರೀಕ್ಷೆಗೆ ವಿನಾಯಿತಿ ನೀಡಬಹುದು” ಎಂದು ಕರಡು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಆತ್ಮಹತ್ಯೆ, ಕೊಲೆ ಅಥವಾ ಅಪಘಾತ ಪ್ರಕರಣಗಳು ಪಾಸಿಟಿವ್ ಅಥವಾ ಶಂಕಿತ ಕೊರೊನಾವೈರಸ್ ಸೋಂಕಿನ ಪ್ರಕರಣವಾಗಿರಬಹುದು. ಅಗತ್ಯ ಪ್ರಕ್ರಿಯೆ ಮಾಡಿದ ನಂತರ, ಯಾವುದೇ ಅಪರಾಧದ ಶಂಕೆ ಇಲ್ಲದಿದ್ದರೆ ಮೆಡಿಕೋ ಲೀಗಲ್ ಅಟಾಪ್ಸಿಗೆ ರಿಯಾಯಿತಿಯನ್ನು ನೀಡುವ ಅಧಿಕಾರವನ್ನು ಪೊಲೀಸರು ಹೊಂದಿರುತ್ತಾರೆ. ಇದನ್ನು ಮೆಡಿಕೋ ಲೀಗಲ್ ಪ್ರಕರಣ ಎಂದು ಪರಿಗಣಿಸಿದರೂ ಮರಣೋತ್ತರ ಪರೀಕ್ಷೆಯಿಂದ ವಿನಾಯಿತಿ ನೀಡಬಹುದು.
ಇಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಸನ್ನಿವೇಶದಲ್ಲಿ ಅನಗತ್ಯವಾಗಿ ಮರಣೋತ್ತರ ಪರೀಕ್ಷೆ ಮಾಡುವುದಕ್ಕೆ ವಿನಾಯಿತಿ ನೀಡಲು ತನಿಖಾಧಿಕಾರಿಗಳು ಮುಂದಾಗಬೇಕಿದೆ ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸುವಾಗ ಮೂಳೆಗಳು ಮತ್ತು ಅಂಗಾಂಶಗಳಿಗೆ ವಾಯುದ್ರವವನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಬಾಹ್ಯ ತಪಾಸಣೆ, ಹಲವು ಫೋಟೋಗಳು ಮತ್ತು ಮೌಖಿಕ ಮರಣೋತ್ತರ ಪರೀಕ್ಷೆಯನ್ನು ಬಳಸಿ (ಡಬ್ಲ್ಯೂಎಚ್‌ಒ ಸೂಚಿಸಿದಂತೆ) ಪೋಸ್ಟ್ ಮಾರ್ಟಮ್ ಮಾಡಬಹುದು. ಈ ವೇಳೆ ದೇಹವನ್ನು ಕೊಯ್ಯುವ ಕ್ರಮವನ್ನು ದೂರ ಮಾಡಬಹುದು ಮತ್ತು ಸಿಬ್ಬಂದಿ, ದೇಹವನ್ನು ನಿರ್ವಹಿಸುವವರು ಮತ್ತು ವೈದ್ಯರ ಮೈಗೆ ಮೃತದೇಹದ ದ್ರವಗಳು ಸಿಡಿಯುವುದನ್ನು ತಡೆಯಬಹುದು.