ಮುಂಬೈ:ಮಹಾರಾಷ್ಟ್ರದಲ್ಲಿ ಎನ್ಸಿಪಿ+ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಶಿವಸೇನೆಗೆ ಇದೀಗ ದಿಢೀರ್ ಶಾಕ್ ಆಗಿದ್ದು, ಸೋನಿಯಾ ಗಾಂಧಿ ಜತೆ ತಾವು ಮೈತ್ರಿ ಸರ್ಕಾರ ರಚನೆ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಶರದ್ ಪವಾರ್ ಹೇಳಿಕೆ ನೀಡಿದ್ದಾರೆ.
ಶಿವಸೇನೆಯ 50: 50 ಸೂತ್ರಕ್ಕೆ ಬಿಜೆಪಿ ನಿರಾಕರಣೆ ಮಾಡುತ್ತಿದ್ದಂತೆ ಅದರೊಂದಿಗೆ ಹೊಂದಿದ್ದ ಸಂಬಂಧ ಕಳೆದುಕೊಂಡು ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದ ಶಿವಸೇನೆ ಈಗಾಗಲೇ ಕಾಂಗ್ರೆಸ್ ಹಾಗೂ ಎನ್ಸಿಪಿ ಮುಖಂಡರೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಿತ್ತು. ಆದರೆ ನಿನ್ನೆ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ಮಾಡಿ ಸುಮಾರು ಗಂಟೆಗಳ ಕಾಲ ಚರ್ಚೆ ನಡೆಸಿರುವ ಎನ್ಸಿಪಿ ಮುಖಂಡ ಶರದ್ ಪವಾರ್, ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಕುರಿತು ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದಿದ್ದು, ಇಲ್ಲಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.