ನವದೆಹಲಿ:ಬಂಗಾಳ ಕೊಲ್ಲಿಯಲ್ಲಿ ಬಾಯುಭಾರ ಕುಸಿತದಿಂದ ಉಂಟಾಗಿರುವ ನಿವಾರ್ ಚಂಡಮಾರುತ ಪೂರ್ವ ಕರಾವಳಿ ಭಾಗದಲ್ಲಿ ಇನ್ನಷ್ಟು ಹಾನಿಮಾಡುವ ಆತಂಕ ಎದುರಾಗಿದೆ. ಈ ಹಿನ್ನೆಲೆ ತಮಿಳುನಾಡು ಮತ್ತು ಪುದುಚೇರಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮುಂದಿನ 12 ಗಂಟೆಯ ಅವಧಿಯಲ್ಲಿ ನಿವಾರ್ ಚಂಡಮಾರುತ ಭೀಕರ ಸ್ವರೂಪ ತಾಳಲಿದ್ದು, ಗಂಟೆಗೆ 120 ಕಿ.ಮೀಟರ್ಗೂ ಹೆಚ್ಚಿನ ವೇಗದಲ್ಲಿ ಗಾಳಿ ಅಪ್ಪಳಿಸಲಿದೆ. ಈ ಹಿನ್ನೆಲೆ ಚಂಡಮಾರುತದಿಂದ ಹಾನಿಗೊಳಗಾಗುವಂತಹ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ನಿವಾರ್ ಎದುರಿಸಲು ಎನ್ಡಿಆರ್ಎಫ್ ಸನ್ನದ್ಧ
ನಿವಾರ್ ಚಂಡಮಾರುತ ಎದುರಿಸಲು 30 ಎನ್ಡಿಆರ್ಎಫ್ ತಂಡಗಳು ಸನ್ನದ್ಧವಾಗಿದ್ದು, ಕರಾವಳಿಯ ಉದ್ದಕ್ಕೂ ನಿಯೋಜನೆ ಮಾಡಲಾಗಿದೆ. ಈ ತಂಡದಲ್ಲಿ ಒಟ್ಟಾರೆ 1200 ಸಿಬ್ಬಂದಿಗಳಿದ್ದು, ಕಾರ್ಯಾಚರಣೆಗೆ ಸಿದ್ಧಗೊಂಡಿದ್ದಾರೆ.
ಒಟ್ಟು ನಿಯೋಜನೆಗೊಂಡ ತಂಡಗಳ ವಿವರ ನೋಡುವುದಾದರೆ
- ತಮಿಳುನಾಡಿ-12 ತಂಡ
- ಪುದುಚೆರಿ-2
- ಕಾರೈಕಲ್-1
- ನೆಲ್ಲೂರು-3
- ಚಿತ್ತೂರು-1
- ವೈಜಾಗ್ ಪೂರ್ವ ಭಾಗ-3
ಒಟ್ಟು 22 ತಂಡಗಳು ಸ್ಥಳದಲ್ಲಿ ಕಾರ್ಯಚರಣೆ ಕೈಗೊಂಡರೆ ಉಳಿದ 8 ತಂಡಗಳು ಹೆಚ್ಚುವರಿ ತಂಡಗಳಾಗಿವೆ.
ಇದಲ್ಲದೆ ಚಂಡಮಾರುತದ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು ತಂಡ ಸಿದ್ಧಗೊಂಡಿದೆ. ಎನ್ಡಿಆರ್ಎಫ್ ನಿಯಂತ್ರಣ ಕೊಠಡಿಯು 24 ಗಂಟೆಗಳ ನಿರಂತರ ಮೇಲ್ವಿಚಾರಣೆ ಮಾಡಲಿದೆ. ಎಲ್ಲಾ ರಾಜ್ಯಗಳೊಂದಿಗೂ ಸಂಪರ್ಕದಲ್ಲಿದ್ದೇವೆ. ಎಲ್ಲಾ ತಂಡಗಳು ವೈರ್ಲೆಸ್ ಸಂವಹನ ಸಾಧನಗಳನ್ನು ತಮ್ಮೊಂದಿಗೆ ಹೊಂದಿವೆ. ಅಗತ್ಯವಿದಲ್ಲಿ ಮರ ಕತ್ತರಿಸುವವರು ಹಾಗೂ ಭೂ ಕುಸಿತ ಉಂಟಾದಾಗ ತ್ವರಿತ ಕಾರ್ಯ ಕೈಗೊಳ್ಳುವವರು ಜೊತೆಯಲ್ಲಿದ್ದಾರೆ ಎಂದಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿಯೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಎನ್ಡಿಆರ್ಎಫ್ ಸಿಬ್ಬಂದಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಜೊತೆಗೆ ಪಿಪಿಇ ಕಿಟ್ ಸಹ ನೀಡಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಐಎಂಡಿಯ ಪ್ರಕಾರ ಮುಂದಿನ 12 ಗಂಟೆಗಳಲ್ಲಿ ಚಂಡಮಾರುತವು ಪಶ್ಚಿಮ ವಾಯುವ್ಯ ಪಥದತ್ತ ಚಲಿಸಲಿದ್ದು, ತಮಿಳುನಾಡು, ಪುದುಚೆರಿ ಭಾಗದಲ್ಲಿ ನವೆಂಬರ್ 26ರ ವರೆಗೆ ವ್ಯಾಪಕ ಮಳೆಯಾಗಲಿದೆ ಎಂದಿದೆ.
ಇದಲ್ಲದೆ ಇಂದು ಸಂಜೆ ವೇಳೆಗೆ ನಿವಾರ್ ಚಂಡಮಾರುತವು ಉಗ್ರ ಸ್ವರೂಪ ತಳೆದು ಗಾಳಿಯ ವೇಗವು ಗಂಟೆಗೆ 145 ಕಿ.ಮೀಟರ್ ತಲುಪುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಚೆನ್ನೈ ಸೇರಿದಂತೆ 7 ಜಿಲ್ಲೆಗಳಲ್ಲಿ ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯ ಮೀನುಗಾರ ಸುರಕ್ಷತೆ ಹಿನ್ನೆಲೆಯಲ್ಲಿ ಸಮೀಪ ಇರುವ ಬಂದರುಗಳಿಗೆ ತೆರಳಲು ಸೂಚಿಸಲಾಗಿದೆ. ಇನ್ನು ಪುದುಚೆರಿಯಲ್ಲಿ ಇಂದು ರಾತ್ರಿ 9ರಿಂದ ಗುರುವಾರ (ನವೆಂಬರ್ 26) ಬೆಳಗ್ಗೆ 6ರವರೆಗೆ ಸಿಆರ್ಪಿಸಿ ಸೆಕ್ಷನ್ 144ರ ಅಡಿ ಕರ್ಫ್ಯೂ ವಿಧಿಸಲಾಗಿದೆ. ಈ ಅವಧಿಯಲ್ಲಿ ತುರ್ತು ಸೇವೆಗಳು ಮಾತ್ರ ಲಭ್ಯ ಇರುತ್ತವೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಆರು ನಿಗದಿತ ರೈಲುಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ನಿವಾರ್ ಚಂಡಮಾರುತ ಭೀತಿ: ಚೆನ್ನೈನಲ್ಲಿ ಬಸ್ ಸೇವೆ ಸ್ಥಗಿತ